ಭಟ್ಕಳ: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಪುರಸಭೆ ವ್ಯಾಪ್ತಿಯ ಅಂಗಡಿ ಬಾಡಿಗೆಗೆ 3 ತಿಂಗಳ ವಿನಾಯತಿ ನೀಡಬೇಕೆಂದು ಶಾಸಕ ಸುನೀಲ ನಾಯ್ಕ ಅವರಿಗೆ ಪುರಸಭೆ ಸಭಾಗೃಹದಲ್ಲಿ ಇಲ್ಲಿನ ಪುರಸಭಾ ಮಳಿಗೆದಾರರು ಮನವಿಯನ್ನು ಮಾಡಿದರು.
ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಲಾಗಿದ್ದು, ಎಲ್ಲೆಡೆ ಅಂಗಡಿ ಮುಂಗಟ್ಟು ವ್ಯಾಪಾರ ವಹಿವಾಟುಗಳು ಬಂದ್ ಆಗಿದ್ದವು. ಇದೇ ಪರಿಸ್ಥಿತಿ ಭಟ್ಕಳ ಪಟ್ಟಣ ವ್ಯಾಪ್ತಿಯಲ್ಲಿಯೂ ಇದ್ದು, ಪುರಸಭೆ ವ್ಯಾಪ್ತಿಯ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿತ್ತು. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮೂರು ತಿಂಗಳುಗಳ ಕಾಲ ಮನೆಯಲ್ಲಿಯೇ ಕುಳಿತಿದ್ದಾರೆ. ಲಕ್ಷಾಂತರ ರೂಪಾಯಿ ಬಂಡವಾಳಗಳನ್ನು ಹಾಕಿಕೊಂಡಿದ್ದು, ವ್ಯಾಪಾರವಿಲ್ಲದೇ ಸಂಸಾರ ನಿಭಾಯಿಸಲು ಕಷ್ಟ ಸಾಧ್ಯವಾದಂತಹ ಪರಿಸ್ಥಿತಿಯಲ್ಲಿ ಸದ್ಯ ಅಂಗಡಿಕಾರರಿದ್ದಾರೆ.
ಇಂತಹ ಸಂಧರ್ಭದಲ್ಲಿ ಘನ ರಾಜ್ಯ ಸರ್ಕಾರ ಬಾಡಿಗೆದಾರರಿಗೆ ಮಾರ್ಚ 2020 ರಿಂದ ಮೇ 2020ರ ತನಕ ಯಾವುದೇ ಬಾಡಿಗೆಯನ್ನು ಮಾಲಿಕರಿಂದ ಹಾಗೂ ಸಂಸ್ಥೆ ಅವರಿಂದ 3 ತಿಂಗಳ ಬಾಡಿಗೆ ವಿನಾಯತಿ ಕೊಡಬೇಕೆಂದು ಪತ್ರಿಕೆಯಲ್ಲಿ ವರದಿಯಾಗಿದ್ದವು. ಅಲ್ಲದೇ ಬೆಂಗಳೂರು ಬಿಬಿಎಂಪಿಯಿಂದ ಅಲ್ಲಿನ ಮಹಾನಗರ ಪಾಲಿಕೆ ಅಂಗಡಿ ಮಳಿಗೆದಾರರಿಗೆ 3 ತಿಂಗಳ ವಿನಾಯತಿ ನೀಡಿದ್ದಾರೆ. ಅಲ್ಲದೇ ಕೆ.ಎಸ್.ಆರ್.ಟಿ.ಸಿ. ಕೂಡ ತನ್ನ ಎಲ್ಲಾ ಅಂಗಡಿ ಮಳಿಗೆದಾರರ 3 ತಿಂಗಳ ಬಾಡಿಗೆಗೆ ವಿನಾಯತಿ ನೀಡಿದ್ದಾರೆ. ಆದ್ದರಿಂದ ನಮಗೆ 3 ತಿಂಗಳ ಬಾಡಿಗೆ ವಿನಾಯತಿ ನೀಡಿದರೆ ತುಂಬಾ ಅನುಕೂಲವಾಗುತ್ತದೆ. ಮೊದಲೇ ವ್ಯಾಪಾರವಿಲ್ಲದೇ ಕಂಗೆಟ್ಟ ನಮಗೆ ಸಾವಿರಾರು ರೂಪಾಯಿ ಅಂಗಡಿ ಬಾಡಿಗೆ ಕಟ್ಟಿ ಎಂದು ತಾವು ಹೇಳಿದರೆ ಅದು ನಮ್ಮಿಂದ ಕಟ್ಟಲು ಅಸಾಧ್ಯವಾದ ಮಾತು. ಹಾಗಾಗಿ ಈ ಬಗ್ಗೆ ನಮಗೆ ವಿನಾಯತಿ ನೀಡುವಂತೆ ಸರಕಾರದ ಮಟ್ಟದಲ್ಲಿ ಮಾತನಾಡಬೇಕೆಂದು ಶಾಸಕ ಸುನೀಲ್ ನಾಯ್ಕ ಅವರಿಗೆ ಮನವಿಯನ್ನು ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಸುನೀಲ್ ನಾಯ್ಕ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಸವಿವರವಾಗಿ ಮಾಹಿತಿ ನೀಡಿ ಅವರಿಗೆ ಮನವಿ ತಲುಪಿಸಿ ಇದಕ್ಕೊಂದು ಪರಿಹಾರ ಕಲ್ಪಿಸುವ ಭರವಸೆಯನ್ನು ನೀಡಿದರು.