ಕಾರವಾರ: ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೇ ಕಂಗಾಲಾದ ಹೊರ ರಾಜ್ಯಗಳ ಕಾರ್ಮಿಕರು ಇದೀಗ ನಡೆದುಕೊಂಡೇ ತಮ್ಮ ಊರಿಗೆ ಹೋಗಲು ನಿರ್ಧಾರ ಮಾಡಿದ್ದು, ರಸ್ತೆ ಹಾಗೂ ರೈಲ್ವೆ ಹಳಿಗಳ ಮೇಲೆ ಸಾಲುಗಟ್ಟಿರುವ ನಿಂತಿದ್ದ ದೃಶ್ಯ ಅಂಕೋಲಾದಲ್ಲಿ ಕಂಡು ಬಂತು.
ಕಾರವಾರ ತಾಲೂಕಿನ ಕದಂಬ ನೌಕಾನೆಲೆ ಎರಡನೇಯ ಹಂತದ ವಿಸ್ತರಣಾ ಕಾಮಗಾರಿ ಕಳೆದ ವರ್ಷದಿಂದ ನಡೆಯುತ್ತಿದ್ದು, ಅದರ ಗುತ್ತಿಗೆ ಪಡೆದಿರುವ ಶಾಜಿ ಎಂಡ್ ಪೋಲಂಜಿ ಹಾಗೂ ಎನ್‌ಸಿಸಿ ಕಂಪನಿಗಳಲ್ಲಿ ನೂರಾರು ಮಂದಿ ಹೊರ ರಾಜ್ಯಗಳ ಕಾರ್ಮಿಕರು ಕೆಲಸ ಮಾಡಿಕೊಂಡಿದ್ದರು.
ಅದರಲ್ಲಿ ಜಾರ್ಖಂಡ್, ಛತ್ತೀಸ್‌ಘಡ ಹಾಗೂ ಉತ್ತರ ಪ್ರದೇಶ ಮೂಲದ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಾಮಗಾರಿ ಹಿನ್ನೆಲೆ ಇಲ್ಲಿಯೇ ಉಳಿದುಕೊಂಡಿದ್ದರು. ಆದರೆ ಲಾಕ್‌ಡೌನ್‌ನಿಂದಾಗಿ ಸದ್ಯ ಕಾಮಗಾರಿ ಸ್ಥಗಿತಗೊಂಡಿದ್ದು, ಕಳೆದ ಎರಡು ತಿಂಗಳಿನಿಂದ ಗುತ್ತಿಗೆ ಕಂಪನಿಗಳು ಕಾರ್ಮಿಕರಿಗೆ ವೇತನ ಸಹ ನೀಡಿಲ್ಲ. ಇದರಿಂದ ಸಂಕಷ್ಟಕ್ಕೊಳಗಾಗಿರುವ ಕಾರ್ಮಿಕರು ಉಳಿದುಕೊಳ್ಳಲು ಖರ್ಚಿಗೂ ಹಣವಿಲ್ಲದೆ ಪರದಾಡುತ್ತಿದ್ದು, ಇದೀಗ ನಡೆದುಕೊಂಡೇ ಊರಿಗೆ ತೆರಳಲು ಮುಂದಾಗಿದ್ದಾರೆ.
ಇನ್ನು ಇಲ್ಲಿನ ಗುತ್ತಿಗೆ ಕಂಪನಿಯಲ್ಲಿ ನೂರಾರು ಮಂದಿ ಕಾರ್ಮಿಕರು ಕೆಲಸ ಮಾಡಿಕೊಂಡಿದ್ದು, ಯಾರಿಗೂ ಸಹ ಕಳೆದೆರಡು ತಿಂಗಳಿನಿಂದ ವೇತವನ್ನೇ ನೀಡಿಲ್ಲ. ಲಾಕ್‌ಡೌನ್ ಇರುವ ಹಿನ್ನೆಲೆ ಕಾರ್ಮಿಕರಿಗೆ ಎಲ್ಲಿಯೂ ಕೆಲಸ ಇಲ್ಲದಂತಾಗಿದ್ದು, ಊರಿಗೆ ತೆರಳುವುದಕ್ಕೂ ಬಸ್ ವ್ಯವಸ್ಥೆ ಇಲ್ಲದೇ ಅತಂತ್ರರಾಗಿದ್ದಾರೆ.
ಸದ್ಯ ಕೇಂದ್ರ ಸರ್ಕಾರ ಹೊರ ರಾಜ್ಯದಲ್ಲಿ ಕೆಲಸ ಮಾಡಿಕೊಂಡಿರುವವರು ಸೇವಾ ಸಿಂಧು ಆ್ಯಪ್ ಮೂಲಕ ಅರ್ಜಿ ಸಲ್ಲಿಸಿ ತಮ್ಮ ಊರುಗಳಿಗೆ ವಾಪಸಾಗಲು ಅವಕಾಶ ಮಾಡಿಕೊಟ್ಟಿದೆ. ಆದ್ರೆ ಸೇವಾ ಸಿಂಧು ಅರ್ಜಿ ಸಲ್ಲಿಸಲು ದಿನಗಟ್ಟಲೇ ಸಾಲುಗಟ್ಟಿ ನಿಲ್ಲಬೇಕಾಗಿದ್ದು, ಅಲ್ಲದೇ ಖರ್ಚು ಮಾಡಲು ಹಣವೂ ಇಲ್ಲದಿರುವ ಹಿನ್ನೆಲೆ ಸುಮಾರು 60ಕ್ಕೂ ಅಧಿಕ ಕಾರ್ಮಿಕರು ನಡೆದುಕೊಂಡು ಊರಿಗೆ ಹೊರಟಿರುವುದಾಗಿ ತಿಳಿಸಿದ್ದಾರೆ.