ಹೊನ್ನಾವರ: ಗುಣವಂತೆ ಗ್ರಾಮದ ನೆಲವಂಕಿ ಗುಡ್ಡದಲ್ಲಿರುವ ಪಾಂಡವರ ಕೆರೆಯಲ್ಲಿ ಸಂಪೂರ್ಣ ನುಜ್ಜಗುಜ್ಜಾದ ಸ್ಥಿತಿಯಲ್ಲಿ ಐಷಾರಾಮಿ ಕಾರೊಂದು ಪತ್ತೆಯಾಗಿದೆ.
ಜಾನುವಾರು ಕಳ್ಳತನಕ್ಕೆ ಬಂದವರು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದ ಪರಿಣಾಮ ದುಷ್ಕರ್ಮಿಗಳು ಕಾರನ್ನು ಬಿಟ್ಟು ಓಡಿ ಹೋಗಿದ್ದರಂತೆ. ಜನ ಆಕ್ರೋಶಗೊಂಡು ಕಾರನ್ನು ಈ ರೀತಿ ಮಾಡಿ ಕೆರೆಗೆ ತಳ್ಳಿದ್ದಾರೆ ಎಂದು ಶಂಕಿಸಲಾಗಿದೆ.
![luxury-car-found-in-pandavara-lake](https://etvbharatimages.akamaized.net/etvbharat/prod-images/kn-bkl-01-find-a-luxury-car-in-the-lake-kac-10002_15062020192032_1506f_1592229032_813.jpg)
ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಕಾರಿನ ಚಾಲಕ ಹಾಗೂ ಮಾಲೀಕನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಈಚೆಗೆ ಕಸಾಯಿಖಾನೆಗೆ ಸಾಗಿಸುವ ಉದ್ದೇಶದಿಂದ ಮಂಕಿಯ ನವಾಯತ್ ಕಾಲೋನಿಯಲ್ಲಿ ಮನೆಯ ಹಿಂಭಾಗದ ತೋಟದಲ್ಲಿ ಕದ್ದ ಜಾನುವಾರುಗಳನ್ನು ಕಟ್ಟಿ ಹಾಕಿದ್ದನ್ನು ಪೊಲೀಸರು ಪತ್ತೆ ಮಾಡಿದ್ದರು.
ಈ ಪ್ರಕರಣ ನಡೆದ ಮರು ದಿನವೇ ಈ ಘಟನೆ ನಡೆದಿದೆ. ಹೀಗಾಗಿ ಈ ಭಾಗದಲ್ಲಿ ಅಕ್ರಮ ಗೋ ಸಾಗಾಟ ಎಗ್ಗಿಲ್ಲದೆ ನಡೆಯುತ್ತಿರುವ ಅನುಮಾನ ಮೂಡಿಸಿದೆ. ಗುಣವಂತೆ, ನೆಲವಂಕಿ, ಹಕ್ಕಲಕೇರಿ, ಮುಗಳಿ, ಕೆಳಗಿನೂರು, ಅಪ್ಸರಕೊಂಡ ಭಾಗದಲ್ಲಿ ನಿರಂತರ ಅಕ್ರಮ ಗೋ ಸಾಗಾಟ ದೂರುಗಳು ಕೇಳಿ ಬರುತ್ತಿವೆ.
ಒಂದು ವೇಳೆ ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದರೂ ಆರೋಪಿಗಳು ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇದನ್ನು ಕಂಡು ಬೇಸತ್ತಿರುವ ಸ್ಥಳೀಯರು, ಜಾನುವಾರು ಕಳ್ಳರಿಗೆ ತಾವೇ ಶಿಕ್ಷೆ ನೀಡಲು ಮುಂದಾಗಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತು ಅಕ್ರಮ ಗೋ ಸಾಗಾಟಕ್ಕೆ ಕಡಿವಾಣ ಹಾಕಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.