ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಈ ವರ್ಷದ ಮಳೆಗಾಲವೂ ಪ್ರವಾಹ ಪರಿಸ್ಥಿತಿ ತಂದೊಡ್ಡಿದೆ. ಇತ್ತ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ತಪ್ಪಲು ಪ್ರದೇಶದ ಡಬ್ಗುಳಿ ಗ್ರಾಮ ಗುಡ್ಡಕುಸಿತದಿಂದ ನಲುಗಿ ಹೋಗಿದ್ದು, ಗ್ರಾಮಸ್ಥರು ನೆರವಿಗಾಗಿ ಕಾಯುತ್ತಿದ್ದಾರೆ.
ಕಳೆದ ಮಳೆಗಾಲದಲ್ಲಿ ಡಬ್ಗುಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದ ಗುಡ್ಡ ಕುಸಿದು ಅಡಕೆ ತೋಟಕ್ಕೆ ಹಾನಿಯಾಗಿತ್ತು. ಈ ವರ್ಷದ ಗುಡ್ಡಕುಸಿತದಿಂದ ಅರ್ಧ ಕಿಲೋ ಮೀಟರ್ಗಟ್ಟಲೇ ತೋಟ ನಾಶವಾಗಿದೆ. ಜೊತೆಗೆ ಗ್ರಾಮದಿಂದ ಹೊರಹೋಗಲು ದಾರಿಯೇ ಇಲ್ಲದೇ ಜನರು ಆತಂಕ್ಕೊಳಗಾಗಿದ್ದಾರೆ. ಭಾನುವಾರ ಬೆಳಗ್ಗೆ ಡಬ್ಗುಳಿಯ ಇಬ್ಬರು ಯುವಕರು 6-7 ಕಿ.ಮೀ ಬೆಟ್ಟ-ಗುಡ್ಡಗಳನ್ನು ದಾಟಿ ಹೋಗಿ ಯಲ್ಲಾಪುರ ಪಟ್ಟಣವನ್ನು ಸೇರಿಕೊಂಡಿದ್ದು, ತಮ್ಮ ಊರಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಜನಪ್ರತಿನಿಧಿಗಳು, ಕಂದಾಯ ಇಲಾಖೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಸ್ಥಳಕ್ಕೆ ಬರುತ್ತೇವೆ. ನಾಳೆ ಜೆಸಿಬಿ ತರಿಸುತ್ತೇವೆಂಬ ಆಶ್ವಾಸನೆ ನೀಡಿದ್ದಾರೆಯೇ ವಿನಃ, ಡಬ್ಗುಳಿಯ ಭೂಕುಸಿತ ಪ್ರದೇಶಕ್ಕೆ ಇದುವರೆಗೂ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲ. ರಸ್ತೆ, ದೂರವಾಣಿ ಸಂಪರ್ಕ ಕಡಿತಗೊಂಡಿದ್ದರಿಂದ ಡಬ್ಗುಳಿಯ ಸದ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿಯಿಲ್ಲ. ಹತ್ತು ಮನೆಗಳ, ಐವತ್ತಕ್ಕೂ ಹೆಚ್ಚು ಮಂದಿ ನೆರವಿಗಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ: ಪ್ರವಾಹಕ್ಕೆ ಸಿಲುಕಿದ್ದ ಮದುಮಗ ಸೇರಿ 15ಕ್ಕೂ ಹೆಚ್ಚು ಮಂದಿ ರಕ್ಷಣೆ