ಕಾರವಾರ : ಸಂಪ್ರದಾಯದಂತೆ ಕಾಮಣ್ಣನ ಸುಟ್ಟು ಬಣ್ಣ ಬಳಿದು ಸಮುದ್ರ ಸ್ನಾನ ಮಾಡುವ ಮೂಲಕ ಕರಾವಳಿ ಭಾಗಗಳಲ್ಲಿ ವಿಭಿನ್ನವಾಗಿ ಹೋಳಿ ಹಬ್ಬ ಆಚರಿಸಲಾಗುತ್ತದೆ. ಆದರೆ, ಕೋವಿಡ್ ಎರಡನೇ ಅಲೆ ಆತಂಕದ ಹಿನ್ನೆಲೆ ಜಿಲ್ಲಾಡಳಿತ ಮನೆ ಮನೆಯಲ್ಲಿ ಮಾತ್ರ ಹೋಳಿ ಆಚರಣೆಗೆ ಅವಕಾಶ ನೀಡಿ ಸಮುದ್ರ ಸ್ನಾನಕ್ಕೆ ನಿರ್ಬಂಧ ಹೇರಿದೆ.
ಹೋಳಿ ಆಚರಣೆಗೆ ನಿರ್ಬಂಧ : ಹಿಂದೂಗಳ ಪಾಲಿಗೆ ಯುಗಾದಿಗೂ ಮುನ್ನ ವರ್ಷದ ಕೊನೆಯ ದೊಡ್ಡ ಹಬ್ಬವಾಗಿ ಹೋಳಿ ಆಚರಿಸಲಾಗುತ್ತದೆ. ಕಷ್ಟಗಳು ದೂರವಾಗಿ, ಸುಖ, ನೆಮ್ಮದಿ ಪ್ರಾಪ್ತವಾಗಲಿ ಎಂದು ಕಾಮಣ್ಣನನ್ನು ಸುಟ್ಟು ಪರಸ್ಪರ ಬಣ್ಣ ಎರಚಿ ಖುಷಿಯೊಂದಿಗೆ ಹಬ್ಬ ಆಚರಿಸಲಾಗುತ್ತದೆ. ಕಳೆದ ವರ್ಷ ಕೊರೊನಾ ಕಾರಣದಿಂದ ಹೋಳಿ ಹಬ್ಬ ಮಂಕಾಗಿತ್ತು. ಈ ಬಾರಿಯೂ ಕೊರೊನಾ 2ನೇ ಅಲೆ ಆತಂಕದ ಹಿನ್ನೆಲೆ ಹೋಳಿ ಆಚರಣೆಗೆ ನಿರ್ಬಂಧವಿದೆ.
ಕಡಲತೀರದಲ್ಲಿ ಹೋಳಿ ಸ್ನಾನ ನಿಷಿದ್ಧ : ಕರಾವಳಿ ಭಾಗಗಳಲ್ಲಿ ಬಣ್ಣದಾಟದ ಬಳಿಕ ಸಮುದ್ರ ಸ್ನಾನಕ್ಕೆ ತೆರಳುವ ಸಂಪ್ರದಾಯ ಇದೆ. ಆದರೆ, ಕಾರವಾರದಲ್ಲಿ ಠ್ಯಾಗೋರ್ ಕಡಲತೀರದಲ್ಲಿ ಹೋಳಿ ಸ್ನಾನ ಮಾಡದಂತೆ ಜಿಲ್ಲಾಡಳಿತ ನಿರ್ಬಂಧಿಸಿದೆ. ನಿಯಮ ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಕಾರವಾರ ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಎಚ್ಚರಿಸಿದ್ದಾರೆ.
ಮಾರುಕಟ್ಟೆಗಳಲ್ಲಿಲದ ನಿಯಮ ಹೋಳಿ ಆಚರಣೆಗೇಕೆ?: ಈ ಆದೇಶ ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಕರಾವಳಿಯಲ್ಲಿ ಹೋಳಿಯಲ್ಲಿ ಸಮುದ್ರ ಸ್ನಾನಕ್ಕೆ ತನ್ನದೇ ಆದ ಸಂಪ್ರದಾಯ, ಹಿನ್ನೆಲೆ ಇದೆ. ಹೋಳಿ ಹಬ್ಬದಲ್ಲಿ ಕಾಮದಹನದ ಬಳಿಕ ಸಮುದ್ರ ಸ್ನಾನ ಮಾಡಿದರೆ ಎಲ್ಲವೂ ಶುದ್ಧ ಎಂಬ ನಂಬಿಕೆ ಜನರಲ್ಲಿದೆ. ಕಾರವಾರ ಸಂಡೇ ಮಾರುಕಟ್ಟೆಯಲ್ಲಿ ಗುಂಪು ಗುಂಪಾಗಿ ಕೋವಿಡ್ ನಿಯಮ ಉಲ್ಲಂಘಿಸಿ ಜನ ಓಡಾಡುತ್ತಾರೆ.
ಸಂಜೆಯಾದರೆ ಇದೇ ಬೀಚ್ನಲ್ಲಿ ಜನ ಸುತ್ತಾಡುತ್ತಾರೆ. ಆಗ ಇರದ ನಿರ್ಬಂಧ ಹೋಳಿಗೆ ಯಾಕೆ. ನಾಳೆ ಒಂದು ದಿನದ ಮಟ್ಟಿಗಾದರೂ ಹೋಳಿ ಆಡಿ ಸಮುದ್ರ ಸ್ನಾನ ಮಾಡಲು ಅವಕಾಶ ನೀಡುವಂತೆ ಸ್ಥಳೀಯರಾದ ತಿಮ್ಮಪ್ಪ ಹರಿಕಾಂತ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಒಂದೇ ದಿನಕ್ಕೆ 3082 ಮಂದಿಗೆ ಸೋಂಕು.. 12 ಮಂದಿ ಬಲಿ