ಕಾರವಾರ: ಲಾಕ್ ಡೌನ್ ಸಡಿಲಿಕೆ ನಡುವೆಯೂ ಗೋವಾ ಸರ್ಕಾರ ಗಡಿ ಬಂದ್ ಮಾಡಿರುವುದಕ್ಕೆ ಮತ್ತು ಕೋವಿಡ್ ಪರೀಕ್ಷೆ ಕಾರಣವೊಡ್ಡಿ 2 ಸಾವಿರ ರೂ. ಪಡೆಯುತ್ತಿರುವುದನ್ನು ವಿರೋಧಿಸಿ ಗೋವಾ ಗಡಿಯಲ್ಲಿ ಇಂದು ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ವಾಟಾಳ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ, ಟ್ಯಾಕ್ಸಿ ಯುನಿಯನ್ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಗೋವಾ ಗೇಟ್ ಬಳಿ ತೆರಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಈಗಾಗಲೇ ಎಲ್ಲ ರಾಜ್ಯಗಳಿಗೂ ಓಡಾಟಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ. ಆದರೆ ಗೋವಾ ಸರ್ಕಾರ ಮಾತ್ರ ಗಡಿ ಬಂದ್ ಮಾಡಿ ಹಟಮಾರಿ ಧೋರಣೆ ಮುಂದುವರಿಸುತ್ತಿದೆ. ಮಾತ್ರವಲ್ಲದೆ ರಾಜ್ಯದಿಂದ ಗೋವಾಗೆ ತೆರಳುವವರಿಗೆ ಹೆಚ್ಚುವರಿ 2 ಸಾವಿರ ರೂಪಾಯಿ ಕೋವಿಡ್ ಪರೀಕ್ಷೆಗೆಂದು ವಸೂಲಿ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಉತ್ತರ ಕನ್ನಡ ಜಿಲ್ಲೆ ಹಾಗೂ ಗೋವಾದ ನಡುವೆ ಸಾಕಷ್ಟು ಒಡನಾಟ ಇದೆ. ಜಿಲ್ಲೆಯ ಜನರು ಗೋವಾದಲ್ಲಿದ್ದು, ಗೋವಾದವರು ಜಿಲ್ಲೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಹೀಗಿರುವಾಗ ಕೇವಲ ಗೋವಾ ರಾಜ್ಯಕ್ಕೆ ಅವಶ್ಯವಿರುವ ಮೀನು, ತರಕಾರಿ, ಹಾಲು ಸೇರಿದಂತೆ ಇನ್ನಿತರ ವಾಹನಗಳ ಮಾತ್ರ ಬಿಡಲಾಗುತ್ತಿದೆ. ಉಳಿದಂತೆ ಯಾರೇ ತೆರಳಿದರೂ ಪ್ರತಿಯೊಬ್ಬರಿಗೆ ಕೋವಿಡ್ ಪರೀಕ್ಷೆಗೆಂದು 2 ಸಾವಿರ ಪಡೆಯುತ್ತಿರುವುದು ಸರಿಯಲ್ಲ. ಕೂಡಲೇ ಗಡಿ ತೆರವುಗೊಳಿಸಿ ಹಣ ಪಡೆಯುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಶಾಸಕಿ ರೂಪಾಲಿ ನಾಯ್ಕ ಗೋವಾ ಮುಖ್ಯಮಂತ್ರಿ ಜೊತೆ ಮಾತನಾಡುವುದಾಗಿ ತಿಳಿಸಿದ್ದು, ಸೆ. 1ರಿಂದ ಗಡಿ ತೆರವುಗೊಳಿಸುವುದಾಗಿ ಅಲ್ಲಿನ ಮುಖ್ಯಮಂತ್ರಿ ಭರವಸೆ ನೀಡಿರುವುದು ತಿಳಿದು ಬಂದಿದೆ. ಒಂದೊಮ್ಮೆ ಮಾತು ತಪ್ಪಿದಲ್ಲಿ ಸೆ.5 ರಂದು ಗೋವಾ ರಾಜ್ಯದ ವಾಹನಗಳನ್ನು ತಡೆದು ಗಡಿಯಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.