ಕಾರವಾರ: ಸದ್ಯ ಎಲ್ಲೆಡೆ ಬಿಸಿಲಿನ ಜಳ ಜೋರಾಗಿದ್ದು, ಸೂರ್ಯನಿಗೆ ಮೈಯೊಡ್ಡಿ ಓಡಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕರಾವಳಿಯಾದ್ಯಂತ ಕಳೆದೆರಡು ತಿಂಗಳಿಂದ ಜಳಪಿಸುತ್ತಿರುವ ಬಿಸಿಲಿನ ಜತೆ ತಾಪಮಾನ ಕೂಡ ಜಾಸ್ತಿಯಾಗಿದ್ದು, ಇಲ್ಲಿನ ಪಶ್ಚಿಮಘಟ್ಟದ ಅರಣ್ಯ ಪ್ರದೇಶಗಳಲ್ಲಿ ಇದೀಗ ಕಾಡ್ಗಿಚ್ಚಿನ ಆತಂಕ ಎದುರಾಗಿದೆ.
ಹೌದು, ಕಳೆದೊಂದು ತಿಂಗಳ ಹಿಂದೆ ಮೈಸೂರಿನ ಬಂಡಿಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಹೊತ್ತಿದ ಕಿಡಿಯೊಂದು ಸಾವಿರಾರು ಎಕರೆ ಅರಣ್ಯ ನಾಶ ಮಾಡಿತ್ತು. ಘಟನೆಯಿಂದ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಅಲ್ಲದೆ ಅವಘಡದಲ್ಲಿ ಹಲವು ವನ್ಯ ಪ್ರಾಣಿಗಳು ಸುಟ್ಟು ಕರಕಲಾಗಿದ್ದವು. ಆದರೆ ಇದೀಗ ಇಂತಹದೆ ಆತಂಕ ಉತ್ತರಕನ್ನಡ ಜಿಲ್ಲೆಯ ಕಾಡುಗಳಲ್ಲಿ ಮನೆಮಾಡಿದೆ. ಶೇ. 73% ರಷ್ಟು ಅರಣ್ಯ ಪ್ರದೇಶವನ್ನೊಳಗೊಂಡಿರುವ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ವಿಪರಿತ ಬಿಸಿಲು ಬಿಳುತ್ತಿದ್ದು, ಬಹುತೇಕ ಅರಣ್ಯ ಪ್ರದೇಶಗಳಲ್ಲಿ ಗಿಡ ಮರಗಳು ಸೇರಿದಂತೆ ಮರದ ಎಲೆಗಳು ಒಣಗಿ ನಿಂತಿವೆ. ಇಂತಹ ಸ್ಥಿತಿಯಲ್ಲಿ ಸಣ್ಣದೊಂದು ಕಿಡಿ ತಾಗಿದರೂ ನಂದಿಸಲು ಸಾಧ್ಯವಾಗದ ಮಟ್ಟಿಗೆ ಕಾಡ್ಗಿಚ್ಚು ಸಂಭವಿಸುವ ಆತಂಕ ಮನೆ ಮಾಡಿದೆ.
ಈಗಾಗಲೇ ಕಾರವಾರದ ಬಿಣಗಾ ಬಳಿ ತಿಂಗಳ ಹಿಂದೆ ಗುಡ್ಡಕ್ಕೆ ಬೆಂಕಿ ಹತ್ತಿ ಸುಮಾರು 5 ಎಕರೆ ಪ್ರದೇಶದಲ್ಲಿ ಬಿದಿರು ಹಾಗೂ ಗಿಡ ಮರಗಳಿಗೆ ಹಾನಿಯಾಗಿತ್ತು. ವಾರದ ಹಿಂದೆ ನಗರದ ಬೈತಖೋಲ್ ಬಂದರು ಬಳಿ ಮತ್ತೆ ಬೆಂಕಿ ಕಾಣಿಸಿಕೊಂಡು ಅದರ ಜ್ವಾಲೆ ಸುಮಾರು ನಾಲ್ಕೈದು ಎಕರೆಯಷ್ಟು ಪ್ರದೇಶವನ್ನು ಸುಟ್ಟುಹಾಕಿತ್ತು. ಬಳಿಕ ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಸ್ಥಳೀಯರು ಬೆಂಕಿ ನಂದಿಸಿ ಆಗಬಹುದಾದ ಹೆಚ್ಚಿನ ಅನಾಹುತ ತಡೆದಿದ್ದರು. ಆದರೆ ಇಂತಹದೆ ಸ್ಥಿತಿ ಇದೀಗ ಕರಾವಳಿ ಹಾಗೂ ಮಲೆನಾಡು ಭಾಗದ ಅರಣ್ಯ ಪ್ರದೇಶದಲ್ಲಿದೆ. ಕರಾವಳಿಯ ಬಹುತೇಕ ಭಾಗಗಳಲ್ಲಿ ಎಲೆ ಉದುರುವ ಮರಗಳಿದ್ದು, ಜತೆಗೆ ಬಿದಿರು ಮಟ್ಟಿಗಳು ಬಿಸಿಲಿಗೆ ಒಣಗಿ ನಿಂತಿವೆ. ಇವುಗಳಿಗೆ ಸಣ್ಣದೊಂದು ಕಿಡಿತಾಗಿದರು ಇಡೀ ಅರಣ್ಯವೇ ನಾಶವಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಈ ಬಗ್ಗೆ ಕಾರವಾರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ಅವರನ್ನು ಕೇಳಿದರೆ, ಈಗಾಗಲೇ ಅರಣ್ಯ ಪ್ರದೇಶದಲ್ಲಿ ಬೆಂಕಿ ತಗುಲದಂತೆ ಮುನ್ನೆಚ್ಚರಿಕೆ ವಹಿಸಲು ಅರಣ್ಯ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಕೆಲವೆಡೆ ಆಕಸ್ಮಿಕವಾಗಿ ಇನ್ನು ಕೆಲವೆಡೆ ಕಿಡಿಗೇಡಿಗಳ ಕೃತ್ಯದಿಂದ ಬೆಂಕಿ ತಗಲುವ ಸಾಧ್ಯತೆ ಇರುತ್ತದೆ. ಈ ಸಂಬಂಧ ಅರಣ್ಯ ಇಲಾಖೆ ಸಿಬ್ಬಂದಿ ನಿತ್ಯವು ಬಹುತೇಕ ಪ್ರದೇಶಗಳನ್ನು ಸುತ್ತುವರೆಯುತ್ತಿರುತ್ತಾರೆ. ಅಲ್ಲದೇ ಇಲಾಖೆ ಅಧಿಕಾರಿಗಳು ವಾಟ್ಸಾಪ್ ಗ್ರೂಪ್ಗಳ ಮೂಲಕ ಸಿಬ್ಬಂದಿಯೊಂದಿಗೆ ನೇರ ಸಂಪರ್ಕದಲ್ಲಿದ್ದು ಎಲ್ಲಿ ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲಿದರೂ ತಕ್ಷಣ ಕ್ರಮ ಕೈಗೊಳ್ಳುವಂತೆ ಮುಂಜಾಗ್ರತಾ ಕ್ರಮ ವಹಿಸುತ್ತಿದ್ದಾರೆ. ಜನರು ಕೂಡ ಇಂತಹ ಘಟನೆಗಳು ನಡೆದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಿದರು. ಇನ್ನು ಅರಣ್ಯ ಇಲಾಖೆ ವತಿಯಿಂದ ಪ್ರತಿವರ್ಷ ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ನಾಟಕಗಳ ಮೂಲಕ ಕಾಡ್ಗಿಚ್ಚಿನ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಅಲ್ಲದೇ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ನಂದಿಸುವ ವೀಕ್ಷಕರನ್ನ ಸಹ ನೇಮಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಒಟ್ಟಾರೇ ಕರಾವಳಿ ಜನತೆಗೆ ಸದ್ಯ ಬಿರು ಬೇಸಿಗೆಯ ಬಿಸಿಲಿನ ಝಳ ಒಂದೆಡೆಯಾದ್ರೆ ಅರಣ್ಯ ಪ್ರದೇಶಗಳಿಗೆ ಬೆಂಕಿ ತಗುಲುವ ಆತಂಕ ಇನ್ನೊಂದೆಡೆಯಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನ ಕೈಗೊಂಡು ಸಾರ್ವಜನಿಕರಿಗೂ ಜಾಗೃತಿ ಮೂಡಿಸಬೇಕಿದೆ.