ಕಾರವಾರ: ಮೋಡ ಇದ್ದು, ಗುಡುಗು-ಸಿಡಿಲು ಇದ್ದಾಗ ಮಳೆ ಬರುವ ಮುನ್ಸೂಚನೆ ಕೊಡಬಹುದು. ಈಗ ಮೋಡವೂ ಇಲ್ಲ, ಗುಡುಗು-ಸಿಡಿಲೂ ಇಲ್ಲ. ಆದರೂ ನೀವು ಮಳೆ ಬರುತ್ತದೆ ಎನ್ನುತ್ತಿರುವುದು ಕೇವಲ ಅದು ನಿಮ್ಮ ನಿರೀಕ್ಷೆ ಎಂದು ಸಿಎಂ ಬದಲಾವಣೆ ಚರ್ಚೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾರವಾರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ಗೋವಾದಲ್ಲಿ ಎಲ್ಲಾ ಮುಖಂಡರು ಸೇರಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದು ಹೇಗೆ ಎಂಬ ಬಗ್ಗೆ ಫೀಲ್ಡ್ ವರ್ಕ್ ಮಾಡುತ್ತಿದ್ದೇವೆ. ಗೋವಾಕ್ಕೆ ಸ್ಥಿರ ಸರ್ಕಾರ, ವಿಕಾಸ ಬೇಕು. ಆ ರೀತಿಯ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಗೋವಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್‌ಗೆ ಅವರ ಅಭ್ಯರ್ಥಿಗಳ ಮೇಲೆಯೇ ವಿಶ್ವಾಸವಿಲ್ಲ. ಜನರಿಗೆ ಗೊತ್ತಿದೆ, ಅಭಿವೃದ್ಧಿ ಮಾಡಿರುವುದು ಬಿಜೆಪಿ ಸರ್ಕಾರ. ರಸ್ತೆ, ಬಂದರು, ವಿಮಾನ ನಿಲ್ದಾಣ ಎಲ್ಲವೂ ಆಗುತ್ತಿರುವುದು ಬಿಜೆಪಿ ಸರ್ಕಾರ ಬಂದ ಮೇಲೆ. ಅಲ್ಲಿಯ ಜನರಿಗೆ ಗೊತ್ತಿದೆ, ಡಬಲ್ ಎಂಜಿನ್ ಸರ್ಕಾರ ಬಂದರೆ ಅಭಿವೃದ್ಧಿ ಆಗುತ್ತದೆಯೆಂದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದಲ್ಲಿ ನಂಬರ್ 1 ಆಗುತ್ತದೆ ಎಂದರು.
ನಾವೆಲ್ಲ ರೈತರ ಮಕ್ಕಳು. ಎತ್ತಿನ ಬಂಡಿಗೆ ಕೋಣ ಕಟ್ಟಲಿಕ್ಕೆ ಬರ್ತದಾ? ಕಟ್ಟಿದರೆ ಎತ್ತು ಏರಿಗೆ, ಕೋಣ ನೀರಿಗೆ ಇಳೀತದೆ ಅಲ್ವಾ? ಹಾಗೆ ಕೇಂದ್ರದಲ್ಲಿ ದೇಶಭಕ್ತ, ಸಬ್ ಕಾ ಸಾಥ್ ವಿಕಾಸ್ ಎನ್ನುವ ಮೋದಿಯವರ ನೇತೃತ್ವ ಇರಬೇಕಾದರೆ ರಾಜ್ಯದಲ್ಲೂ ಅಂಥದ್ದೇ ಸರ್ಕಾರ ಇರಬೇಕಲ್ವಾ? ಅದನ್ನ ಬಿಟ್ಟು ತಾಲಿಬಾನಿಗಳನ್ನು ಓಲೈಸುವವರನ್ನು ಅಧಿಕಾರಕ್ಕೆ ಕೂರಿಸಿದರೆ, ಕಾಂಗ್ರೆಸ್ ಆಡಳಿತದಲ್ಲಿ ಏನೇನು ಆಯಿತು ಎನ್ನುವುದನ್ನು ಮರೆಯಬೇಡಿ ಎಂದು ಹೇಳಿದರು.
ಇದನ್ನೂ ಓದಿ: ಹಿರಿಯ ನಟ ಅಶ್ವತ್ಥ ನಾರಾಯಣ ಇನ್ನಿಲ್ಲ
ಬಿಜೆಪಿಯಿಂದ ಹಲವು ಮುಖಂಡರು ಕಾಂಗ್ರೆಸ್‌ಗೆ ಸೇರುತ್ತಾರೆಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮುಳುಗೋ ಹಡಗಿಗೆ ಯಾರಾದರು ಸೇರುತ್ತಾರಾ? ಕಾಂಗ್ರೆಸ್ ಎಲ್ಲಿದೆ? ಪಂಚರಾಜ್ಯದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಎಲ್ಲಿಯಾದರೂ ಯಾರಾದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರಾ? ಬುದ್ಧಿವಂತರೆಲ್ಲ ಹೊರಗಡೆ ಬರೋದಿಕ್ಕೆ ನೋಡುತ್ತಾರೆ. ಏನೋ ವಿಧಿ ಇಲ್ಲ, ಜಾಗ ಎಲ್ಲ ಇನ್ನುವವರು ಅಲ್ಲಿಯೇ ಉಳಿದುಕೊಳ್ಳುತ್ತಾರೆ. ಇನ್ನು ಕೆಲವರು ಅಪ್ಪ ಹಾಕಿದ ಆಲದ ಮರವೆಂದು ನೇತು ಹಾಕಿಕೊಳ್ಳುತ್ತಾರೆ, ನೇತು ಹಾಕೊಳ್ಳಲಿ ಬಿಡಿ ಎಂದರು.
ಉಸ್ತುವಾರಿ ಸಚಿವರ ಬದಲಾವಣೆ ಕುರಿತು ಮಾತನಾಡಿದ ಅವರು, ಒಂದೊಂದು ಹೊಸ ಪ್ರಯೋಗ. ಹೊಸ ಪ್ರಯೋಗದಲ್ಲಿ ಒಳ್ಳೆಯ ಫಲಿತಾಂಶನೂ ಬರಬಹುದು, ಆದರೆ ಇದು ಶಾಶ್ವತವಲ್ಲ. ಒಳ್ಳೆ ಫಲಿತಾಂಶ ಬಂದರೆ ಮುಂದುವರಿಸುತ್ತೇವೆ. ಇಲ್ಲದಿದ್ದರೆ ಮುಖ್ಯಮಂತ್ರಿಗಳು ಬದಲಾಯಿಸುತ್ತಾರೆ. ಯಾರು ಸಚಿವರಾಗಿರುತ್ತಾರೋ, ಅವರು ಅವರ ಖಾತೆಯನ್ನೂ ಮೀರಿ ರಾಜ್ಯಕ್ಕೆ ಸಚಿವರಾಗಬೇಕು. ಆಗ ಒಂದು ಅನುಭವ ಸಿಗುತ್ತದೆ ಎಂಬ ಉದ್ದೇಶ ಇದರ ಹಿಂದಿದೆ ಎಂದು ಹೇಳಿದರು.
ಪತ್ರಕರ್ತರೊಂದಿಗೆ ಮಾತಿನ ಭರದಲ್ಲಿ ಸಿ.ಟಿ.ರವಿ ಪರೇಶ್ ಮೇಸ್ತನ ಹೆಸರು ಉಲ್ಲೇಖಿಸಿದರು. ತಕ್ಷಣ ಪತ್ರಕರ್ತರು ಮೇಲಿಂದ ಮೇಲೆ ಪ್ರಶ್ನಿಸಿದ್ದಕ್ಕೆ, ಈ ಬಗ್ಗೆ ಇನ್ನೊಂದು ಸಾರಿ ಮಾತಾಡೋಣ ಎಂದರು. ಆದರೂ ಬಿಡದ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಅವರು, ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಕೆಲವೊಮ್ಮೆ ತಕ್ಷಣ ಸಿಗುತ್ತಾರೆ. ಕೆಲವರು ಯೋಜನಾಬದ್ಧವಾಗಿ ಮಾಡಿದವರನ್ನು ಯೋಜನಾಬದ್ಧವಾಗಿಯೇ ಹಿಡಿಯಬೇಕಾಗುತ್ತದೆ, ಹಿಡಿಯುತ್ತೇವೆ. ನೀವೇನಾದರೂ ಸಲಹೆ ಕೊಟ್ಟರೆ, ಸೂಕ್ತ ಮಾಹಿತಿ ನೀಡಿದರೆ ಖಂಡಿತವಾಗಿಯೂ ಆ ನೆಲೆಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ನನಗೆ ಅದರ ಬಗ್ಗೆ ಮಾಹಿತಿ ಇಲ್ಲ ಎಂದರು.