ಭಟ್ಕಳ: ಪರವಾನಿಗೆ ಇಲ್ಲದೆ, ಅಕ್ರಮವಾಗಿ ವಧೆಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ನಗರ ಠಾಣಾ ಪೊಲೀಸರು, ಜಾನುವಾರುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿ ಪಟ್ಟಣದ ಮಗ್ದೂಮ್ ಕಾಲೋನಿ ನಿವಾಸಿ ಮೊಹಮ್ಮದ್ ಇಸ್ಮಾಯಿಲ್ ಶೇಖ್ ಮಹ್ಮದ್ ಹುಸೇನ್ ಎಂದು ತಿಳಿದು ಬಂದಿದೆ. ಈತನು ವಾಹನವೊಂದಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ 6 ಜಾನುವಾರುಗಳನ್ನು (5 ಆಕಳು, 1 ಕರು) ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮುಂಜಾನೆ 6.30ರ ಸುಮಾರಿಗೆ ದಾಳಿ ನಡೆಸಿದ ಶಹರ ಠಾಣಾ ಪೊಲೀಸರು ಡೊಂಗರಪಳ್ಳಿ ಹನುಮಂತ ದೇವಸ್ಥಾನದ ಬಳಿ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಪರಾರಿಯಾಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಓದಿ : ಸಗಣಿ ಕುಳ್ಳಿಗಾಗಿ ಅಕ್ಕ ಪಕ್ಕದ ಮನೆಯವರ ಬೀದಿ ಕಾಳಗ: ನವವಿವಾಹಿತನ ಸಾವಿನಲ್ಲಿ ಗಲಾಟೆ ಅಂತ್ಯ
ಗೋಹತ್ಯೆ ನಿಷೇಧದ ಅಡಿಯಲ್ಲಿ ದಾಖಲಾಯ್ತು ಮೊದಲ ಪ್ರಕರಣ: ಕರ್ನಾಟಕ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ನಂತರ ಭಟ್ಕಳ ತಾಲೂಕಿನಲ್ಲಿ ಮೊದಲ ಪ್ರಕರಣ ದಾಖಲಾದಂತಾಗಿದೆ. ಪೊಲೀಸ್ ಇಲಾಖೆ ಪ್ರಕರಣವನ್ನು ಭಟ್ಕಳ ಉಪವಿಭಾಗಾಧಿಕಾರಿಗಳಿಗೆ ಶಿಪಾರಸ್ಸು ಮಾಡಿದ್ದು, ಅವರು ಗೋವುಗಳನ್ನು ಯಾವ ಗೋಶಾಲೆಗೆ ಕಳಿಸಬೇಕು ಎಂದು ನಿರ್ಧರಿಸಲಿದ್ದಾರೆ. ಪಿಎಸ್‍ಐ ಭರತ್ ಕುಮಾರ ಪ್ರಕರಣ ದಾಖಲಿಸಿದ್ದು, ಪಿಎಸ್‍ಐ ಕುಡಗಂಟಿ ತನಿಖೆ ನಡೆಸುತ್ತಿದ್ದಾರೆ.