ಶಿರಸಿ: ಇಲ್ಲಿಯ ಗಣೇಶನಗರದ ಮನೆಯೊಂದರ ಬೀಗ ಮುರಿದು ಬೆಲೆಬಾಳುವ ಸ್ವತ್ತುಗಳನ್ನು ಕಳುವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹಾನಗಲ್ ಮೂಲದ ಅಬ್ದುಲ್ (24) ಹಾಗೂ ಅಜಯ್ (19) ಬಂಧಿತ ಆರೋಪಿಗಳು. ಇವರು ಗಣೇಶ ನಗರದ ಮಂಜುನಾಥ್ ಕಾಲೋನಿಯಲ್ಲಿನ ಮನೆಯೊಂದರ ಬೀಗ ಒಡೆದು ಮನೆಯಲ್ಲಿದ್ದ ಬಂಗಾರದ ಚೈನ್, ಕಿವಿಯೋಲೆ ಸೇರಿದಂತೆ ಅಂದಾಜು 1.30 ಲಕ್ಷ ರು ಮೌಲ್ಯದ ಸ್ವತ್ತನ್ನು ಕದ್ದು ಪರಾರಿಯಾಗಿದ್ದರು.
ಈ ಕುರಿತಂತೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಡಿ.ಎಸ್.ಪಿ ಗೋಪಾಲಕೃಷ್ಣ ನಾಯಕ ಮಾರ್ಗದರ್ಶನದಲ್ಲಿ ಸಿಪಿಐ ಪ್ರದೀಪ ಬಿ.ಯು. ನೇತ್ರತ್ವದಲ್ಲಿ ಪಿಎಸ್ಐಗಳಾದ ನಂಜಾ ನಾಯ್ಕ, ಶ್ಯಾಮ ಪಾವಸ್ಕರ್, ಸಂಪತಕುಮಾರ, ನಾಗೇಂದ್ರ ನಾಯ್ಕ, ಸಿಬ್ಬಂದಿಗಳಾದ ಪ್ರದೀಪ ರೇವಣಕರ್, ರಮೇಶ ಮುಚ್ಚಂಡಿ, ಚೇತನಕುಮಾರ ಎಚ್., ಸುರೇಶ ಕಟ್ಟಿ ಬಂಧನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.