ಭಟ್ಕಳ(ಉತ್ತರ ಕನ್ನಡ): ತಾಲೂಕಿನಲ್ಲಿ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಲ್ಲಿನ ಶಂಸುದ್ದೀನ್ ಸರ್ಕಲ್ ನೀರಿನಿಂದ ಜಲಾವೃತಗೊಂಡಿದೆ. ಶನಿವಾರ ತಡರಾತ್ರಿಯಿಂದ ಪ್ರಾರಂಭವಾದ ಮಳೆಯಿಂದ ಭಟ್ಕಳದ ಚೌಥನಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ವಿವಿಧ ರಸ್ತೆಗಳು, ಚೌಥನಿ ಗ್ರಾಮ ಸಂಪೂರ್ಣ ಜಲಾವೃತವಾಗಿವೆ.
ಪಟ್ಟಣದ ಶಂಸುದ್ದೀನ್ ವೃತ್ತದಲ್ಲಿ ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದೆ ಸಂಪೂರ್ಣ ಜಲಾವೃತಗೊಂಡಿದೆ. ಕೆಲವು ಮನೆಗಳಿಗೂ ನೀರು ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಅಸಮರ್ಪಕವಾಗಿರುವ ಕಾರಣ ಈ ರೀತಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.ತಾಲೂಕಿನ ಗ್ರಾಮೀಣ ಭಾಗದಲ್ಲೂ ಮಳೆ ಮುಂದುವರಿದಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವು ಕಡೆ ರಸ್ತೆಗಳು ಜಲಾವೃತಗೊಂಡಿದೆ.
ದೇವಾಲಯಗಳು ಜಲಾವೃತ:
ಭಟ್ಕಳದಲ್ಲಿ ಶನಿವಾರ ಬೆಳಿಗ್ಗೆಯಿಂದ ಭಾನುವಾರ ಬೆಳಿಗ್ಗೆವರೆಗೆ 209 ಮಿ.ಮೀ ಮಳೆ ದಾಖಲಾಗಿದೆ. ಪರಿಣಾಮ ಇಲ್ಲಿನ ಚೌಥನಿ ನದಿ ಸೇರಿದಂತೆ ಮೂಡ ಭಟ್ಕಳ ಶರಾಬಿ ಹೊಳೆ ತುಂಬಿ ಹರಿದಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಚೌಥನಿ ಕುದುರೆ ಬೀರಪ್ಪ ದೇವಸ್ಥಾನ ಮತ್ತು ಮೂಡಭಟ್ಕಳ ಬೃಂದಾವನ ದೇವಸ್ಥಾನ ನೀರಿನಿಂದ ಜಲಾವೃತಗೊಂಡಿದೆ.