ಕಾರವಾರ: ಮಲೆನಾಡಿನಲ್ಲಿ ವಿಪರೀತ ಮಳೆಯಾಗುತ್ತಿರುವ ಕಾರಣ ನದಿಗಳು ತುಂಬಿ ಹರಿಯುತ್ತಿವೆ. ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಹೀಗೆ ಬಿಟ್ಟ ನೀರು ಇದೀಗ ಕರಾವಳಿಯಲ್ಲಿ ಪ್ರವಾಹ ಭೀತಿ ತಂದೊಡ್ಡಿದೆ.
ಉತ್ತರಕನ್ನಡ ಹಾಗೂ ಶಿವಮೊಗ್ಗದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನದಿಗಳು ಮೈದುಂಬಿವೆ. ಇದರಿಂದ ಜಲಾಶಯಗಳು ಭರ್ತಿಯಾಗಿದ್ದು, ಸೂಪಾದಿಂದ 31 ಸಾವಿರ ಕ್ಯೂಸೆಕ್, ಕೊಡಸಳ್ಳಿಯಿಂದ 48 ಸಾವಿರ ಕ್ಯೂಸೆಕ್, ಕದ್ರಾದಿಂದ 58 ಸಾವಿರ ಕ್ಯೂಸೆಕ್, ಲಿಂಗನಮಕ್ಕಿಯಿಂದ 58 ಸಾವಿರ ಕ್ಯೂಸೆಕ್ ಹಾಗೂ ಗೇರುಸೊಪ್ಪ ದಿಂದ 77 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.
ಹೀಗೆ ಬಿಟ್ಟ ನೀರು ಅದಾಗಲೇ ಕಾಳಿ ಹಾಗೂ ಶರಾವತಿ ನದಿಯಂಚಿನ ತೋಟ ಹಾಗೂ ಗದ್ದೆಗಳಿಗೆ ನುಗ್ಗಿದ್ದು, ತಗ್ಗು ಪ್ರದೇಶದಲ್ಲಿನ ಮನೆಗಳಿಗೂ ನೀರು ನುಗ್ಗಿ ಹಾನಿಯಾಗಿದೆ. ಇನ್ನು, ಶಿರಸಿ ಸಿದ್ದಾಪುರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಅಘನಾಶಿನಿ ನದಿ ಕೂಡ ತುಂಬಿ ಹರಿಯುತ್ತಿದ್ದು, ಮಳೆ ಮುಂದುವರಿದಲ್ಲಿ ಕುಮಟಾದ ಹೆಗಡೆ, ಮಿರ್ಜಾನ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರವಾಹ ಎದುರಾಗುವ ಆಂತಕ ತಲೆದೋರಿದೆ.
ಮತ್ತೊಂದೆಡೆ ಗೇರುಸೊಪ್ಪ ಅಣೆಕಟ್ಟೆಯಿಂದ ನೀರು ಹರಿಬಿಟ್ಟಿರುವ ಕಾರಣ ಶರಾವತಿ ಕೊಳ್ಳದ ಎಡ- ಬಲ ದಂಡೆ ತುಂಬಿ ಹರಿಯುತ್ತಿದೆ. ಕೊಡಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಎದೆಮಟ್ಟಕ್ಕೆ ನೀರು ಬಂದಿದ್ದು, ತೋಟ ಹಾಗೂ ಮನೆಗಳು ಜಲಾವೃತವಾಗಿವೆ. ಅನಿಲಗೋಡ, ಮೂರ್ನಕುಳಿ, ಹೈಗುಂದ, ಹೊಸಾಡ ಶಾಲೆಗಳಲ್ಲಿ ಆಶ್ರಯ ಕೇಂದ್ರ ತೆರೆಯಲಾಗಿದೆ. ಇದರಲ್ಲಿ 35 ಕುಟುಂಬಗಳ 129 ಜನ ಆಶ್ರಯ ಪಡೆದಿದ್ದಾರೆ.