ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾದ ಬೆನ್ನಲ್ಲೇ ಹಲವೆಡೆ ಗುಡ್ಡ ಕುಸಿತವಾಗಿದೆ. ಕೆಲವೆಡೆ ಗುಡ್ಡ ಬಿರುಕುಬಿಟ್ಟಿದೆ. ಸದ್ಯ ಮಳೆ ಕಡಿಮೆಯಾಗಿದೆ. ಆದರೂ ಗುಡ್ಡ ಕುಸಿಯುವ ಭೀತಿ ಎದುರಾಗಿದ್ದು ಕೇಂದ್ರ ಭೂ ವಿಜ್ಞಾನಿಗಳ ತಂಡ ಭಟ್ಕಳ, ಹೊನ್ನಾವರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಣ್ಣಿನ ಪರೀಕ್ಷೆ ನಡೆಸಿ ಸರ್ವೆ ಕಾರ್ಯ ನಡೆಸುತ್ತಿದೆ.
ಕಳೆದ ಕೆಲ ದಿನಗಳ ಹಿಂದೆ ಸುರಿದ ಜೋರು ಮಳೆಯಿಂದಾಗಿ ಜಿಲ್ಲೆ ನಲುಗಿತ್ತು. ಭಟ್ಕಳದ ಕೆಲವು ಪ್ರದೇಶಗಳು ಮುಳುಗಡೆಯಾಗಿದ್ದು ಒಂದೆಡೆಯಾದರೆ ತಾಲ್ಲೂಕಿನ ಮುಟ್ಟಳ್ಳಿಯಲ್ಲಿ ಮನೆ ಮೇಲೆ ಗುಡ್ಡ ಬಿದ್ದು ನಾಲ್ವರು ಜೀವ ಕಳೆದುಕೊಂಡಿದ್ದರು. ಈ ದುರ್ಘಟನೆಯ ಬೆನ್ನಲ್ಲೇ ಹೊನ್ನಾವರದ ಅಪ್ಸರಕೊಂಡದಲ್ಲಿಯೂ ಗುಡ್ಡದ ಭಾಗವೊಂದರಲ್ಲಿ ಬಿರುಕು ಕಾಣಿಸಿಕೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗುಡ್ಡದ ಬುಡದಲ್ಲಿರುವ ಸುಮಾರು 69 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಗುಡ್ಡ ಕುಸಿತದ ಪ್ರದೇಶಗಳಿಗೆ ಕೇಂದ್ರ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಹಾಗೂ ಜಿಲ್ಲಾ ಭೂ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಮಣ್ಣಿನ ಪರೀಕ್ಷೆ ಜೊತೆಗೆ ಭೂ ಕುಸಿತಕ್ಕೆ ಕಾರಣಗಳು ಮತ್ತು ಕುಸಿಯಬಹುದಾದ ಪ್ರದೇಶಗಳ ಬಗ್ಗೆ ಸರ್ವೆ ನಡೆಯುತ್ತಿದೆ.
ಈಗಾಗಲೇ ಭಟ್ಕಳದ ಮುಟ್ಟಳ್ಳಿ, ಹೊನ್ನಾವರದ ಅಪ್ಸರಕೊಂಡ ಭಾಗಕ್ಕೆ ತೆರಳಿರುವ ತಂಡ ಪರಿಶೀಲಿಸಿದೆ. ಶಿರಸಿಯ ಜಾಜಿಗುಡ್ಡ, ಕುಮಟಾದ ತಂಡ್ರಕುಳಿ, ಯಲ್ಲಾಪುರ ಭಾಗದ ಕಳಚೆ, ಜೋಯಿಡಾ ಭಾಗದ ಅಣಶಿ ಪ್ರದೇಶದಲ್ಲಿ ಇನ್ನೂ ಒಂದು ವಾರ ಕಾಲ ಈ ತಂಡ ಸರ್ವೆ ಕಾರ್ಯ ನಡೆಸಲಿದ್ದು ನಂತರ ಜಿಲ್ಲಾಡಳಿತಕ್ಕೆ ವರದಿ ನೀಡಲಿದೆ.
ಇದನ್ನೂ ಓದಿ: ಅಮೂಲ್, ಮದರ್ ಡೈರಿ ಹಾಲಿನ ದರ ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳ