ಕಾರವಾರ: ಲಾಕ್ಡೌನ್ ತೆರವಿನ ಬಗ್ಗೆ ರಾಜ್ಯ ಸರ್ಕಾರ ಹೊರಡಿಸಿರುವ ಪರಿಷ್ಕೃತ ಆದೇಶದನ್ವಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂ.14 ರಿಂದ 21 ರವರೆಗೆ ಸಾರ್ವಜನಿಕರ ಅಗತ್ಯ ವಸ್ತುಗಳ ಖರೀದಿಗೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ. ತಿಳಿಸಿದ್ದಾರೆ.
ಕಾರವಾರದಲ್ಲಿ ಈ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಲಾಕ್ಡೌನ್ ಸಡಿಲಿಕೆ ಎಂದು ಅನಗತ್ಯ ಓಡಾಡಬೇಡಿ. ಕೋವಿಡ್ ಮಾರ್ಗಸೂಚಿಯ ಪಾಲನೆಯೊಂದಿಗೆ ಆಹಾರ, ದಿನಸಿ, ಹಣ್ಣು, ತರಕಾರಿ, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಬೂತ್ ಮತ್ತು ಪ್ರಾಣಿಗಳ ಮೇವಿನೊಂದಿಗೆ ವ್ಯವಹರಿಸುವ ಅಂಗಡಿಗಳಿಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯ ನಿರ್ವಹಿಸಲು ಅವಕಾಶವಿರುತ್ತದೆ.
ಆಪ್ಟಿಕಲ್ ಅಂಗಡಿಗಳು, ರಸ್ತೆ ಬದಿ ಮಾರಾಟಗಾರರಿಗೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿಕಾರರಿಗೆ ಹಾಗೂ ಮದ್ಯದಂಗಡಿ ಮತ್ತು ಮಳಿಗೆಗಳಿಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಅನುಮತಿಸಿದೆ. ಎಲ್ಲಾ ಉತ್ಪಾದನಾ ಘಟಕಗಳು, ಕೈಗಾರಿಕೆಗಳು ತಮ್ಮ ಸಿಬ್ಬಂದಿ ಸಾಮರ್ಥ್ಯದ ಶೇ. 50ರೊಂದಿಗೆ ಕಾರ್ಯನಿರ್ವಹಿಸಬೇಕು.
ಕೋವಿಡ್ ಘಟಕಗಳು, ಸಂಸ್ಥೆಗಳು, ಗಾರ್ಮೆಂಟ್ ತಯಾರಿಕೆಯಲ್ಲಿ ತೊಡಗಿರುವ ಕೈಗಾರಿಕೆಗಳು ಶೇ. 30 ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ತಮ್ಮ ಮನೆಗಳ ಹೊರಗಿನ ವ್ಯಕ್ತಿಗಳ ಚಲನೆಯನ್ನು ಕಡಿಮೆ ಮಾಡಲು ಎಲ್ಲಾ ವಸ್ತುಗಳ ಮನೆ ವಿತರಣೆಯನ್ನು (ಹೋಮ್ ಡಿಲೇವರಿ) 24x7 ಪ್ರೋತ್ಸಾಹಿಸಲಾಗುತ್ತದೆ. ನಿರ್ಮಾಣ ಸಾಮಗ್ರಿಗಳೊಂದಿಗೆ ವ್ಯವಹರಿಸುವ ಎಲ್ಲಾ ಅಂಗಡಿಗಳು, ಸಂಸ್ಥೆ ವಿಶೇಷವಾಗಿ ಸಿಮೆಂಟ್ ಮತ್ತು ಉಕ್ಕು ಮುಂತಾದ ಅಂಗಡಿಗಳಿಗೆ ಕೋವಿಡ್ ಸೂಕ್ತ ನಡವಳಿಕೆಯ ಪಾಲನೆಯೊಂದಿಗೆ ಕಂಟೈನ್ಮೆಂಟ್ ಝೋನ್‌ಗಳ ಹೊರಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ ಎಂದರು.
- ಉದ್ಯಾನವನ ತೆರೆಯಲು ಅನುಮತಿ
ಕೋವಿಡ್ ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ನಡಿಗೆ ಮತ್ತು ಜಾಗಿಂಗ್ ಉದ್ದೇಶಕ್ಕಾಗಿ ಬೆಳಿಗ್ಗೆ 5 ರಿಂದ 10 ರವರೆಗೆ ಉದ್ಯಾನವನಗಳನ್ನು ತೆರೆಯಲು ಅನುಮತಿಯಿದೆ. ಆದರೆ ಯಾವುದೇ ಗುಂಪು ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ. ಟ್ಯಾಕ್ಸಿಗಳು ಮತ್ತು ಆಟೋ ರಿಕ್ಷಾಗಳನ್ನು ನಿರ್ವಹಿಸಲು ಅನುಮತಿಯಿದ್ದು, ಗರಿಷ್ಠ ಇಬ್ಬರು ಪ್ರಯಾಣಿಕರನ್ನು ಮಾತ್ರ ಸಾಗಿಸಬಹುದು.
- ಜಿಲ್ಲೆಗೆ ಸೀಮಿತವಾಗಿ ತೆಗೆದುಕೊಂಡ ಹೆಚ್ಚುವರಿ ನಿಯಂತ್ರಣ ಕ್ರಮಗಳು:
ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದ ಅದೇಶದನ್ವಯ ಜಿಲ್ಲೆಯಲ್ಲಿ ಮದುವೆ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದನ್ನು ನಿಷೇಧಿಸಿದೆ. ತಹಶೀಲ್ದಾರರು ಆಯಾ ತಾಲೂಕು ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಕಂಡು ಬಂದಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಅಂತಹ ಪ್ರದೇಶಗಳನ್ನು ಮೈಕ್ರೋ ಕಂಟೈನ್ಮೆಂಟ್ ವಲಯವನ್ನಾಗಿ ಘೋಷಣೆ ಮಾಡಿ ಸಂಪೂರ್ಣ ಲಾಕ್ ಡೌನ್ ಮಾಡಬಹುದು. ಇಂತಹ ಪ್ರದೇಶಗಳಲ್ಲಿ ದಿನನಿತ್ಯದ ಅಗತ್ಯ ವಸ್ತುಗಳು, ತರಕಾರಿ ಹಾಗೂ ದಿನಸಿಯನ್ನು ಮನೆ ಮನೆಗೆ ಮಾರಾಟ ಮಾಡಲು ಸ್ಥಳೀಯ ಆಡಳಿತ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
- ರಾತ್ರಿ ಕರ್ಪ್ಯೂ:
ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಅನ್ವಯ ಜೂ.21 ರವರೆಗೆ ರಾತ್ರಿ ಕರ್ಪ್ಯೂ ಜಾರಿಯಲ್ಲಿರಲಿದೆ. ಈ ಸಂದರ್ಭದಲ್ಲಿ ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ವ್ಯಕ್ತಿಗಳ ಚಲನೆಯನ್ನು ಸಂಜೆ 7 ರಿಂದ ಬೆಳಿಗ್ಗೆ 5 ರವರೆಗೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ತುರ್ತು ಅಗತ್ಯವಿರುವ ರೋಗಿಗಳು ಮತ್ತು ಅವರ ಪರಿಚಾರಕರು ಅಥವಾ ವ್ಯಕ್ತಿಗಳನ್ನು ಸ್ಥಳಾಂತರಿಸಲು ಅನುಮತಿಸಲಾಗುತ್ತದೆ. ರಾತ್ರಿಯಲ್ಲಿ ಕಾರ್ಯಾಚರಣೆ ಅಗತ್ಯವಿರುವ ಎಲ್ಲಾ ಕೈಗಾರಿಕೆಗಳು ಅಥವಾ ಕಂಪನಿಗಳು ಕಾರ್ಯ ನಿರ್ವಹಿಸಬಹುದು.
- ಪ್ರಯಾಣಿಕರ ಸಂಚಾರಕ್ಕೆ ಅನುಮತಿ
ಟ್ರಕ್‌ಗಳು, ಸರಕು ವಾಹನಗಳು ಅಥವಾ ಖಾಲಿ ವಾಹನಗಳು ಸೇರಿದಂತೆ ಯಾವುದೇ ಸರಕು ವಾಹಕಗಳ ಮೂಲಕ ಎಲ್ಲಾ ರೀತಿಯ ಸರಕುಗಳ ಚಲನೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಹೋಮ್ ಡಿಲೇವರಿ ಮತ್ತು ಇ-ಕಾಮರ್ಸ್ ಕಂಪನಿಗಳ ಕಾರ್ಯಾಚರಣೆ ಅನುಮತಿಸಲಾಗಿದೆ. ರೈಲು ಮತ್ತು ವಿಮಾನ ಪ್ರಯಾಣವನ್ನು ಅನುಮತಿಸಲಾಗಿದೆ. ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳನ್ನು ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಿಗೆ ಚಲಿಸಲು ಅನುಮತಿಸಲಾಗಿದೆ.
- ವಾರಾಂತ್ಯದ ಕರ್ಫ್ಯೂ:
ಹೊಸ ಮಾರ್ಗಸೂಚಿಗಳ ಅನ್ವಯ ಈ ಕೆಳಗೆ ಕಾಣಿಸಿದ ಅಗತ್ಯ ಮತ್ತು ತುರ್ತು ಚಟುವಟಿಕೆಗಳನ್ನು ಹೊರತುಪಡಿಸಿ ಸೋಮವಾರ ಬೆಳಿಗ್ಗೆ 7 ರಿಂದ ಸೋಮವಾರ ಬೆಳಿಗ್ಗೆ 5 ರವರೆಗೆ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಅವರ ಸ್ವಾಯತ್ತ ಸಂಸ್ಥೆಗಳು, ನಿಗಮಗಳು, ತುರ್ತು, ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವುದು. ಎಲ್ಲಾ ಕೈಗಾರಿಕಾ ಕಂಪನಿಗಳ ಸಂಸ್ಥೆಗಳು ತುರ್ತು ಮತ್ತು ಅಗತ್ಯ ಸೇವೆಗಳನ್ನು ನಿರ್ವಹಿಸುವ ಮತ್ತು 24/7 ಕಾರ್ಯಾಚರಣೆಗಳ ಅಗತ್ಯವಿರುವ ಸಂಸ್ಥೆಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುತ್ತದೆ.