ಕಾರವಾರ: ತಾಲೂಕಿನ ಚಿತ್ತಾಕುಲ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರ ಹುದ್ದೆಗೆ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಮಾಜಿ ಶಾಸಕ ಸತೀಶ್ ಸೈಲ್ ಅವರನ್ನು ಆ ಸ್ಥಾನದಿಂದ ರದ್ದು ಪಡಿಸುವಂತೆ ಸ್ಥಳೀಯರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ದೂರು ನೀಡಿದರು.
ಚಿತ್ತಾಕುಲ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಖಾಲಿ ಇದ್ದ ಓರ್ವ ನಿರ್ದೇಶಕರ ಹುದ್ದೆಗೆ ಅಕ್ರಮವಾಗಿ ಚುನಾವಣೆ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಶಾಸಕಿ ರೂಪಾಲಿ ನಾಯ್ಕ ಅವರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ಪ್ರತಿ ಸಲ್ಲಿಸಿದರು.
ಸಂಘದಲ್ಲಿ ಇತ್ತೀಚಿಗೆ ಶೇರು ಪಡೆದಿರುವ ಮಾಜಿ ಶಾಸಕ ಸತೀಶ್ ಸೈಲ್, ಹಿಂದಿನ ದಿನಾಂಕಕ್ಕೆ ದಾಖಲೆಯನ್ನು ಸೃಷ್ಟಿಸಿದ್ದಾರೆ. ಅಲ್ಲದೇ, ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಗೆ ಹಣದ ಆಮಿಷವೊಡ್ಡಿ ಅಕ್ರಮವಾಗಿ ಚುನಾವಣೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಸಂಘದ ಯಾವುದೇ ಶೇರುದಾರರಿಗೆ ನೋಟಿಸ್ ನೀಡದೆ ಚುನಾವಣೆ ನಡೆಸಲಾಗಿದೆ. ಹೀಗಾಗಿ ಈ ಚುನಾವಣೆಯ ಕುರಿತು ತನಿಖೆ ನಡೆಸಬೇಕು, ಜೊತೆಗೆ ನಿರ್ದೇಶಕರಾದ ಸೈಲ್ ಅವರನ್ನು ವಜಾಗೊಳಿಸಿ, ಈ ಅಕ್ರಮ ಚುನಾವಣೆ ನಡೆಸಲು ಸಹಕರಿಸಿದ ಎಲ್ಲರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಗಾಂವ್ಕರ್, ಹೊಸಾಳಿಯ ನಂದಕಿಶೋರ ನಾಯ್ಕ, ಎಂ.ಪಿ.ರಾಣೆ ಹಾಗೂ ಪ್ರಣಯ್ ರಾಣೆ ಉಪಸ್ಥಿತರಿದ್ದರು.