ಕಾರವಾರ: ಒಂದೆಡೆ ಹೆದ್ದಾರಿಯಲ್ಲಿ ಬೈಕನ್ನ ಏರಿ ರೈಡಿಗೆ ಹೊರಟಿರುವ ಯುವತಿಯರು, ಇನ್ನೊಂದೆಡೆ ಕಡಲಿಗೆ ಇಳಿದು ಸ್ವಚ್ಚತೆಯಲ್ಲಿ ತೊಡಗಿರುವ ಇದೇ ಯುವತಿಯರು. ಮತ್ತೊಂದೆಡೆ ಜನರನ್ನು ಗುಂಪಾಗಿ ಸೇರಿಸಿ ಸರ್ಕಾರಿ ಕಚೇರಿ ಆವರಣದಲ್ಲಿ ಸ್ವಚ್ಛತೆ ಮಾಡ್ತಾ ಇದ್ದಾರೆ. ಈ ದೃಶ್ಯ ಕಂಡು ಬಂದಿದ್ದು ಕಡಲ ನಗರಿ ಕಾರವಾರದಲ್ಲಿ.
ಸ್ವಚ್ಛತೆ ಜಾಗೃತಿಗಾಗಿ ಬೈಕ್ ರೈಡಿಂಗ್: ಕಡಲ ತೀರದ ಸ್ಚಚ್ಚತೆಗಾಗಿ ಇಬ್ಬರು ಯುವತಿಯರು ಜಾಗೃತಿ ಮೂಡಿಸುತ್ತಿದ್ದಾರೆ. ಬೆಂಗಳೂರು ಮೂಲದ ಅನಿತಾ, ಸ್ವಾತಿ ಎನ್ನುವ ಯುವತಿಯರು ಕಡಲ ತೀರದಲ್ಲಿನ ಸ್ವಚ್ಛತೆಯ ಜಾಗೃತಿಯನ್ನ ಮೂಡಿಸೋದಕ್ಕಾಗಿ ಬೈಕ್ ರೈಡಿಂಗ್ ಮಾಡ್ತಾ ಇದ್ದಾರೆ. ಅಕ್ಟೋಬರ್ 9 ನೇ ತಾರೀಖು ಈ ರೈಡಿಂಗ್ನನ್ನ ಬೆಂಗಳೂರಿನಿಂದ ಯುವತಿಯರು ಪ್ರಾರಂಭಿಸಿದ್ದಾರೆ.
ಯುವತಿಯರು ರಾಜ್ಯದ ಕರಾವಳಿ ಜಿಲ್ಲೆಯಾದ ಮಂಗಳೂರು, ಉಡುಪಿಯ ಹಲವು ಕಡಲ ತೀರಗಳಲ್ಲಿ ಸ್ವಚ್ಛತೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ ಇಂದು ಕಾರವಾರಕ್ಕೆ ಆಗಮಸಿದರು. ಕಾರವಾರದಲ್ಲಿ ಪಹರೆ ವೇದಿಕೆ ಎನ್ನುವ ತಂಡದೊಂದಿಗೆ ನಗರದ ರವೀಂದ್ರನಾಥ್ ಠಾಗೋರ್ ಕಡಲ ತೀರದಲ್ಲಿ ಸಚ್ಛತೆಯನ್ನ ಮಾಡಿದರು.
29 ಕಡಲ ತೀರಗಳಿಗೆ ಭೇಟಿ: ಇನ್ನು ರಾಜ್ಯದ ಸುಮಾರು 29 ಕಡಲ ತೀರಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕಾರ್ಯವನ್ನ ಈ ಯುವತಿಯರು ಮಾಡುತ್ತಾ ಇದ್ದಾರೆ. ಸಮುದ್ರಕ್ಕೆ ಪ್ಲಾಸ್ಟಿಕ್ ನಂತಹ ಅಪಾಯಕಾರಿ ವಸ್ತುಗಳ ಸೇರಿ ಮಲೀನ ಆಗುವುದರಿಂದ ಪ್ರಕೃತಿ ಮೇಲೆ ದೊಡ್ಡ ಪರಿಣಾಮ ಬೀಳುತ್ತದೆ. ಈ ನಿಟ್ಟಿನಲ್ಲಿ ನಮ್ಮಲ್ಲಿರುವ ಕಡಲ ತೀರ ಪ್ರದೇಶವನ್ನ ಸ್ವಚ್ಚವಾಗಿಡಬೇಕು ಎನ್ನುವ ಕಾರಣಕ್ಕೆ ಈ ರೈಡಿಂಗ್ ಪ್ರಾರಂಭಿಸಿದ್ದು, ಸುಮಾರು 1400 ಕಿಲೋ ಮೀಟರ್ ಸಂಚರಿಸಲಿದ್ದಾರೆ.
ಇದನ್ನೂ ಓದಿ: ವಯಸ್ಸು 80 ಆದ್ರೂ ಕುಗ್ಗಿಲ್ಲ ಉತ್ಸಾಹ: ಬೈಕ್ ಚಲಾಯಿಸಿಕೊಂಡು ಅಜ್ಜಿಯ ತೀರ್ಥಯಾತ್ರೆ
ಅಲ್ಲದೇ ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯವನ್ನ ಸಹ ಈ ಇಬ್ಬರು ಯುವತಿಯವರು ಮಾಡಿದ್ದಾರೆ. ಖಾಸಗಿ ಉದ್ಯೋಗದಲ್ಲಿದ್ದ ಇಬ್ಬರು ಯುವತಿಯರು ಏನಾದರು ಸಮಾಜಕ್ಕೆ ಮಾಡಬೇಕು ಎಂದು ನಿರ್ಧರಿಸಿ ಉದ್ಯೋಗವನ್ನು ತ್ಯಜಿಸಿ ಈ ರೈಡಿಂಗ್ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತ ಬಂದಿದ್ದಾರೆ.
ಮಹಿಳಾ ಸಬಲೀಕರಣ ಜಾಗೃತಿ: ಇನ್ನು ಸ್ವಾತಿ ಹಾಗೂ ಅನಿತಾ ಈ ಹಿಂದೆ ರಾಜ್ಯದ 31 ಜಿಲ್ಲೆಗಳಲ್ಲಿ ಸಂಚರಿಸಿ ಮಹಿಳಾ ಸಬಲೀಕರಣ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದ್ದರಂತೆ. ಕೆಲವರು ಇವರ ಕಾಯಕಕ್ಕೆ ಅಲ್ಪ ಆರ್ಥಿಕ ಸಹಾಯ ಮಾಡಿದರೆ ಉಳಿದದ್ದನ್ನು ತಾವೇ ಹೊಂದಿಸಿಕೊಂಡು ರೈಡಿಂಗ್ ಮಾಡುತ್ತಿದ್ದಾರೆ.
ಸದ್ಯ ಕಾರವಾರದಲ್ಲಿ ಈ ಬಾರಿಯ ಕಡಲ ತೀರ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ರೈಡಿಂಗನ್ನು ಕೊನೆಗೊಳಿಸಿದ್ದು, ಮುಂದೆ ಇನ್ನೊಂದು ವಿಚಾರವನ್ನು ಇಟ್ಟುಕೊಂಡು ಮತ್ತೆ ಬೈಕ್ ರೈಡಿಂಗ್ ಪ್ರಾರಂಭಿಸುತ್ತೇವೆ ಎನ್ನುವುದು ಯುವತಿಯರ ಮಾತಾಗಿದೆ. ಒಟ್ಟಿನಲ್ಲಿ ಯುವಕರಿಗೆ ನಾವೇನು ಕಮ್ಮಿ ಇಲ್ಲ ಎನ್ನುವಂತೆ ಬೈಕ್ ರೈಡ್ ಮೂಲಕ ಕಡಲ ತೀರದ ಸ್ವಚ್ಛತೆಯ ಜಾಗೃತಿ ಮೂಡಿಸ್ತಾ ಇರೋ ಯುವತಿಯರ ಕಾರ್ಯ ನಿಜಕ್ಕೂ ಮೆಚ್ಚುವಂತದಾಗಿದೆ.