ಕಾರವಾರ: ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ಜಾತಿ ಇದೆ. ಯಾವುದೇ ಪಕ್ಷಕ್ಕೆ ಹೋದ್ರು ನಿಂದು ಯಾವ ಜಾತಿ?, ಎಷ್ಟು ದುಡ್ಡು ತರುತ್ತಿಯಾ ? ಇದನ್ನೇ ಕೇಳುತ್ತಾರೆ ಎಂದು ಪಶ್ಚಿಮ ಪದವೀಧರ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಹೇಳಿದರು.
ಕಾರವಾರದಲ್ಲಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಾವ ರಾಜಕೀಯ ಪಕ್ಷಗಳು ಜಾತಿ ಬಿಟ್ಟಿಲ್ಲ. ಕೆಲವೊಬ್ಬರು ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಕರೆಯುತ್ತಾರೆ. ಆದರೆ, ಎಲ್ಲಾ ಪಕ್ಷಗಳು ಜಾತಿ ಮಾಡುತ್ತವೆ ಎಂದರು. 42 ವರ್ಷಗಳಿಂದ ಏನು ಕೆಲಸ ಮಾಡಲಿಲ್ಲ. ಶಿಕ್ಷಕರಿಗೆ ಹೆದರಿ ಆರಿಸಿ ಬರುತ್ತಿದ್ದಾರೆ ಎಂದು ನನ್ನ ಬಗ್ಗೆ ಕೆಲವರು ಟೀಕೆ ಮಾಡುತ್ತಿದ್ದಾರೆ. ಶಿಕ್ಷಕರನ್ನ ಯಾರಾದ್ರು ಹೆದರಿಸಿ ಆರಿಸಿ ಬರುವುದಕ್ಕೆ ಆಗುತ್ತಾ? ಸುಮ್ಮನೆ ಟೀಕೆ ಮಾಡುತ್ತಾರೆ ಅಷ್ಟೇ ಎಂದರು.
ಬಿಜೆಪಿಯ ದೊಡ್ಡ ದೊಡ್ಡ ನಾಯಕರು ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆದರು. ಆಕಸ್ಮಿಕವಾಗಿ ಬಿಜೆಪಿಗೆ ಬಂದೆ. ಬೆಂಬಲಿಗರು, ಯುವ ಶಿಕ್ಷಕರು ಬಿಜೆಪಿಯಿಂದ ನಿಲ್ಲಿ ಎಂದು ಒತ್ತಾಯ ಮಾಡುತ್ತಿದ್ರು. ಹೀಗಾಗಿ ಬಂದೆ ಎಂದರು. ಜೆಡಿಎಸ್ ನಲ್ಲಿದ್ದವರನ್ನು ನಾನು ಕರ್ಕೊಂಡು ಬಿಜೆಪಿಗೆ ಹೋದರೆ ಪಕ್ಷವನ್ನ ಮುಗಿಸಿದಂತಾಗುತ್ತದೆ. ಹೀಗಾಗಿ, ನಾನು ಆ ಕೆಲಸಕ್ಕೆ ಹೋಗಿಲ್ಲ. ಬರುತ್ತೇವೆ ಎಂದವರಿಗೆ ಬೇಡ ಎಂದಿದ್ದೇನೆ ಎಂದು ಕೆಲ ಜೆಡಿಎಸ್ ನಾಯಕರುಗಳ ಬಿಜೆಪಿ ಸೇರ್ಪಡೆ ವಿಚಾರದ ಸಂಬಂಧ ಸ್ಪಷ್ಟಪಡಿಸಿದರು.
ಪಠ್ಯ ಪರಿಷ್ಕರಣೆಯಲ್ಲಿ ಎಲ್ಲಾ ಪಕ್ಷಗಳು ರಾಜಕೀಯ ಮಾಡಿವೆ: ಹೊರಟ್ಟಿ
ಪಠ್ಯ ಪರಿಷ್ಕರಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯ ಮಾಡಿವೆ. ಸಮಾಜಕ್ಕೆ, ಮಕ್ಕಳಿಗೆ, ದೇಶಕ್ಕೆ ಒಳ್ಳೆಯದು ಆಗುತ್ತೆ ಅನ್ನೋದಿದ್ದರೆ ಪರಿಷ್ಕರಣೆ ಮಾಡಲಿ. ಅದರಲ್ಲಿ ತಪ್ಪೇನಿದೆ. ಆದರೆ, ಅದರಲ್ಲಿ ರಾಜಕೀಯ ಮಾಡಬಾರದು ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ಸಾವಿತ್ರಿಬಾಯಿ ಫುಲೆ ಅವರ ಪಠ್ಯವನ್ನು ತೆಗೆದಿದ್ದು ತಪ್ಪು. ನಾನು ಇದನ್ನು ಒಪ್ಪುವುದಿಲ್ಲ. ಮಹಿಳಾ ಶಿಕ್ಷಣದಲ್ಲಿ ಅವರ ಕೊಡುಗೆ ಅಪಾರವಿದೆ. ಭಗತ್ ಸಿಂಗ್, ಸಾವಿತ್ರಿಬಾಯಿ ಫುಲೆ ಅವರ ಪಠ್ಯ ತೆಗೆದದ್ದು ತಪ್ಪು. ನಾನು ಯಾವ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಪುನರುಚ್ಚರಿಸಿದರು.
ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ.. ಹೆಡಗೆವಾರ್ ಪಠ್ಯವನ್ನು ಸೇರಿಸಿರುವುದನ್ನು ನಾನು ತಪ್ಪು ಎನ್ನಲಾರೆ. ಅದರಲ್ಲಿ ತಪ್ಪೇನಿದೆ? ಒಳ್ಳೆ ಉದ್ದೇಶದಿಂದ ಮಾಡಿದ ಕೆಲಸಗಳು ಯಾವುದೇ ಕಾರಣಕ್ಕೂ ತಪ್ಪಲ್ಲ. ಯಾವ ಅಧಿಕಾರಿಗಳೂ ಶಿಸ್ತಾಗಿ ಕ್ರಮ ಕೈಗೊಳ್ಳದಿದ್ದರಿಂದ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಬಂದಾಗ ಯಾವ ಮಂತ್ರಿ ಬರುತ್ತಾರೋ ಅವರಿಗೆ ಬೇಕಾಗಿದ್ದನ್ನ ಪಠ್ಯದಲ್ಲಿ ತರುತ್ತಾರೆ. ರಾಜಕಾರಣಿಗಳು ಇದರಲ್ಲಿ ಹಸ್ತಕ್ಷೇಪ ಮಾಡಬಾರದು ಎಂದರು.
ಓದಿ : ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಮೂವರು ಅಭ್ಯರ್ಥಿಗಳು ಗೆಲ್ಲುವುದು ಶತಸಿದ್ಧ: ಬಿಎಸ್ವೈ