ಕಾರವಾರ: ಉಡುಪಿ ಜಿಲ್ಲೆಯ ಶಿರೂರು ಟೋಲ್‌ಗೇಟ್ ಬಳಿ ನಡೆದ ಆ್ಯಂಬುಲೆನ್ಸ್ ಅಪಘಾತ ಪ್ರಕರಣ ಕರಾವಳಿ ಭಾಗದ ಜನರನ್ನ ಬೆಚ್ಚಿಬೀಳಿಸಿದೆ. ಅಪಘಾತದಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಮೂಲದ ನಾಲ್ವರು ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಯ ನಂತರ ಇಂದು ಅಂತಿಮ ಸಂಸ್ಕಾರ ನಡೆಸಲಾಯಿತು.
ಇನ್ನೊಂದೆಡೆ ಅಪಘಾತಕ್ಕೆ ಟೋಲ್ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆ್ಯಂಬುಲೆನ್ಸ್ ಚಾಲಕ ಆರೋಪಿಸಿದ್ದರೆ, ಇನ್ನೊಂದೆಡೆ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದ್ದರಿಂದಲೇ ಇಂತಹ ಘಟನೆ ಆಗಲು ಕಾರಣ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
ಚಿಕಿತ್ಸೆ ಕೊಡಿಸಲು ಹೋಗಿ ಮಸಣ ಸೇರುವಂತಾಯ್ತು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಗ್ರಾಮದ ಐಆರ್‌ಬಿ ಟೋಲ್‌ಗೇಟ್‌ನಲ್ಲಿ ನಡೆದಿದ್ದ ಆ್ಯಂಬುಲೆನ್ಸ್ ಅಪಘಾತ ಪ್ರಕರಣ ಇಡೀ ಕರಾವಳಿಯನ್ನೇ ಬೆಚ್ಚಿಬೀಳಿಸುವಂತೆ ಮಾಡಿತ್ತು. ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಖಾಸಗಿ ಆಸ್ಪತ್ರೆಯಿಂದ ತಾಲೂಕಿನ ಹಾಡಗೇರಿ ಗ್ರಾಮದ ಗಜಾನನ ಎನ್ನುವ ರೋಗಿಯನ್ನ ಆ್ಯಂಬುಲೆನ್ಸ್ನಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಅಪಘಾತ ನಡೆದಿತ್ತು.
ಅಪಘಾತದ ಭೀಕರತೆಗೆ ಆ್ಯಂಬುಲೆನ್ಸ್ನಲ್ಲಿದ್ದ ರೋಗಿ ಗಜಾನನ, ಅವರ ಸಂಬಂಧಿಗಳಾದ ಲೋಕೇಶ್ ನಾಯ್ಕ, ಮಂಜುನಾಥ ನಾಯ್ಕ ಹಾಗೂ ಜ್ಯೋತಿ ನಾಯ್ಕ ಎನ್ನುವವರು ಮೃತಪಟ್ಟಿದ್ದರು. ಇಂದು ಬೆಳಗ್ಗೆ ಬೈಂದೂರಿನ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನ ಹಾಡಗೇರಿ ಗ್ರಾಮಕ್ಕೆ ತರಲಾಯಿತು.
ಟೋಲ್‌ಗೇಟ್ ಸಿಬ್ಬಂದಿಯ ನಿರ್ಲಕ್ಷ್ಯ?: ಕುಟುಂಬಸ್ಥರ ಆಕ್ರಂದನದ ನಡುವೆ ಗ್ರಾಮಸ್ಥರ ಸಮ್ಮುಖದಲ್ಲಿ ನಾಲ್ಕೂ ಮೃತದೇಹಗಳ ಅಂತಿಮ ಸಂಸ್ಕಾರವನ್ನ ನೆರವೇರಿಸಲಾಯಿತು. ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಚಾಲಕ ಮಾತನಾಡಿ, ಟೋಲ್ ಬಳಿ ದನ ಅಡ್ಡ ಇದ್ದಿದ್ದರಿಂದಲೇ ತಾನು ಬ್ರೇಕ್ ಹಾಕಬೇಕಾಯಿತು. ಇನ್ನು ಟೋಲ್‌ಗೇಟ್ ಸಿಬ್ಬಂದಿಯ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.
ಘಟಾನುಘಟಿ ರಾಜಕಾರಣಿಗಳಿದ್ದರೂ ಪ್ರಯೋಜನ ಇಲ್ಲ: ಇನ್ನು ಆ್ಯಂಬುಲೆನ್ಸ್ ಅಪಘಾತ ಕಂಡು ಉತ್ತರಕನ್ನಡ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ. ಜಿಲ್ಲೆಯಲ್ಲಿ ಸಣ್ಣ ಪುಟ್ಟ ಖಾಯಿಲೆಗೂ ಆಸ್ಪತ್ರೆಗೆಂದು ಆ್ಯಂಬುಲೆನ್ಸ್ ಹಿಡಿದು ಉಡುಪಿ, ಮಂಗಳೂರಿನ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಇದೆ.
ಜಿಲ್ಲೆಯಲ್ಲಿ ತುರ್ತು ಚಿಕಿತ್ಸೆಗೆ ಸುಸಜ್ಜಿತ ಆಸ್ಪತ್ರೆ ಇಲ್ಲದ ಕಾರಣ ಅನಾರೋಗ್ಯ ಎದುರಾದರೆ ನೆರೆಯ ಜಿಲ್ಲೆಗಳನ್ನ ಅವಲಂಬಿಸುವಂತಾಗಿದೆ. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿ ಎಂದು ಹಲವು ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಯಾರೂ ಸ್ಪಂದಿಸುತ್ತಿಲ್ಲ. ಜಿಲ್ಲೆಯಲ್ಲಿ ಒಬ್ಬ ಸಭಾಧ್ಯಕ್ಷ, ಸಂಸದ, ಒಬ್ಬ ಸಚಿವರು ಸೇರಿ ಆರು ಮಂದಿ ಶಾಸಕರಿದ್ದಾರೆ. ಅಪಘಾತಕ್ಕೆ ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷವೇ ಕಾರಣ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಅಪಘಾತದಲ್ಲಿ ಆ್ಯಂಬುಲೆನ್ಸ್ ಚಾಲಕ ರೋಗಿಯ ಜೀವವನ್ನ ಉಳಿಸಲು ಹೋಗಿ ನಾಲ್ವರ ಸಾವಿಗೆ ಕಾರಣನಾಗಿದ್ದಾನೆ ಎಂಬ ಟೀಕೆಯೂ ಸಹ ವ್ಯಕ್ತವಾಗುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಬೈಂದೂರು ಪೊಲಿಸರು ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಶಿರೂರು ಟೋಲ್ ಕಂಬಕ್ಕೆ ಡಿಕ್ಕಿಯಾದ ಆ್ಯಂಬುಲೆನ್ಸ್; ನಾಲ್ವರು ದಾರುಣ ಸಾವು...ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ