ಕಾರವಾರ: ಅಲೆಯ ಅಬ್ಬರಕ್ಕೆ ಲಂಗರು ಹಾಕಿದ್ದ ಒಂದು ಬೋಟ್ ಹಾಗೂ ಪಾತಿ ದೋಣಿ ದಡಕ್ಕೆ ಅಪ್ಪಳಿಸಿ ಹಾನಿಗೊಳಗಾಗಿರುವ ಘಟನೆ ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ನಡೆದಿದೆ.
ಕಳೆದ ಎರಡು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಗಾಳಿ ಸಹಿತ ಮಳೆಯಾಗುತ್ತಿದ್ದು, ಕಡಲಿನಲ್ಲಿ ಅಲೆಗಳ ಅಬ್ಬರ ಕೂಡ ಜೋರಾಗಿದೆ. ಪರಿಣಾಮ ಮೀನುಗಾರಿಕೆಗೆ ತೆರಳಿದ್ದ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಬೋಟ್ಗಳು ಸೇರಿದಂತೆ ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರದ ಬಳಿ ಲಂಗರು ಹಾಕಿವೆ. ಆದರೆ ಹೀಗೆ ಲಂಗರು ಹಾಕಿದ್ದ ಮಜ್ದೂರ್ ಮತ್ತು ಪ್ರಾವಿನೆನ್ಸ್ ಹೆಸರಿನ ಎರಡು ಮೀನುಗಾರಿಕಾ ಬೋಟುಗಳು ಆ್ಯಂಕರ್ ತುಂಡಾಗಿ ದಡಕ್ಕೆ ಬಂದು ಅಪ್ಪಳಿಸಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಒಂದು ಪಾತಿ ದೋಣಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.
ಮಳೆಯಿಂದಾಗಿ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಬಂದರು ವ್ಯಾಪ್ತಿಯಲ್ಲಿ ಮಲ್ಪೆ ಮಂಗಳೂರು ಭಾಗದ ಬೋಟ್ಗಳು ಲಂಗರು ಹಾಕಿವೆ. ಇಂದೂ ಸಹ ಮಳೆ ಹಿನ್ನೆಲೆ ಬಂದರು ಬಳಿಯೇ ಬೀಡು ಬಿಟ್ಟಿವೆ.