ಶಿರಸಿ: ನಗರಕ್ಕೆ ಹೋಗುತ್ತೇನೆ ಎಂದು ತನ್ನ ಅಜ್ಜಿ ಮನೆಯಿಂದ ಹೋದ ದಿನಗೂಲಿ ನೌಕರನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಸಿದ್ದಾಪುರದ ಕಂಚಿಕೈನಲ್ಲಿ ನಡೆದಿದೆ.
ಕಂಚಿಕೈ ಗ್ರಾಮದ ಪ್ರಭಾಕರ ಸುರೇಶ್ ಗೌಡ (23) ಆತ್ಮಹತ್ಯೆ ಮಾಡಿಕೊಂಡವ. ಈತ ಕಾಣೆಯಾಗಿರುವ ಕುರಿತು ಶನಿವಾರ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಭಾನುವಾರ ಸ್ವಗ್ರಾಮದ ಕೆರೆಯೊಂದರಲ್ಲಿ ಶವ ಪತ್ತೆಯಾಗಿದೆ.
ಅ. 24 ರಂದು ಶಿರಸಿಯ ಚಿಂಚಳ್ಳಿಯಲ್ಲಿರುವ ಅಜ್ಜಿ ಮನೆಗೆ ತೆರಳಿದ್ದ ಯುವಕ ಅಲ್ಲಿಂದ ಶಿರಸಿ ನಗರಕ್ಕೆ ಹೋಗಿ ಬರುತ್ತೇನೆ ಎಂದು ತೆರಳಿದ್ದ. ಆದರೆ, ವಾಪಾಸ್ ಬಂದಿರಲಿಲ್ಲ. ಮನೆಗೂ ತೆರಳದೇ, ಅಜ್ಜಿ ಹಾಗೂ ಸಂಬಂಧಿಕರ ಮನೆಗೂ ಹೋಗಿಲ್ಲದ ಕಾರಣ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.