ಶಿರಸಿ: ಮಕ್ಕಳಾಗದ ಕುಟುಂಬದವರನ್ನು ಸಂಪರ್ಕಿಸಿ ಅವರಿಗೆ ಮಕ್ಕಳಾಗುವ ಗಿಡಮೂಲಿಕೆ ನೀಡುವುದಾಗಿ ವಂಚಿಸುತ್ತಿದ್ದ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಮೂಲದ ಬಂಡಿ ಮಂಜುನಾಥ ಎನ್ನುವವನೇ ಬಂಧಿತ ಆರೋಪಿ. ಈತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈತನು ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಕ್ಕಳಾಗದ ಕುಟುಂಬಗಳ ಮಾಹಿತಿ ಸಂಗ್ರಹಿಸಿ ಬಳಿಕ ಪರಿಚಯಸ್ಥರಂತೆ ವರ್ತಿಸಿ ಅವರಿಗೆ ಮಕ್ಕಳಾಗುವ ಗಿಡಮೂಲಿಕೆ ಔಷಧಗಳನ್ನು ನೀಡುವುದಾಗಿ ನಂಬಿಸಿ ಸಾವಿರಾರು ರೂಪಾಯಿಗಳನ್ನು ಪಡೆದು ವಂಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.