ಭಟ್ಕಳ: ರಥಬೀದಿಯಲ್ಲಿನ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯು 160 ವರ್ಷ ಹಿಂದಿನದಾಗಿದ್ದು, ಕಟ್ಟಡವೂ ಸಂಪೂರ್ಣ ಹಾಳಾಗಿ ಶಿಥಿಲಾವಸ್ಥೆಗೆ ತಲುಪಿದೆ. ಹೀಗಾಗಿ ಹೊಸ ಕೊಠಡಿ ಮಂಜೂರು ಮಾಡಿಕೊಡಬೇಕು ಎಂದು ಶಾಲಾ ಮಕ್ಕಳ ಪಾಲಕರು ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ಪೋಷಕರು, ಈ ಶಾಲೆಯು 160 ವರ್ಷ ಇತಿಹಾಸ ಹೊಂದಿದ್ದು, ಶಾಲೆಯ ಎಲ್ಲ ಕೊಠಡಿ, ಅಡುಗೆ ಕೋಣೆ, ಶೌಚಾಲಯದ ಕಟ್ಟಡಗಳು ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ಬಂದು ತಲುಪಿವೆ. ಶಾಲೆಯಲ್ಲಿ 1 ರಿಂದ 7 ನೇ ತರಗತಿ ವರೆಗೆ 90 ವಿದ್ಯಾರ್ಥಿಗಳು ದಾಖಲಾಗಿದ್ದು, ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಲು ಹೆದರಿಕೆ ಆಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇನ್ನು ಮಳೆಗಾಲದಲ್ಲಿ ಇಲ್ಲಿ ಬಿಸಿಯೂಟ ತಯಾರಿಸಲು ಹಾಗೂ ಆಹಾರ ದಾಸ್ತಾನು ಇಡಲು ತುಂಬಾ ಕಷ್ಟಕರವಾಗಿದೆ ಮತ್ತು ಆಹಾರಗಳು ಈಗಾಗಲೇ ಕೆಡುವಂತಹ ಪರಿಸ್ಥಿತಿಯಲ್ಲಿ ಇದ್ದು ಈ ಆಹಾರವನ್ನೇ ಮಕ್ಕಳು ಸೇವಿಸಬೇಕಾಗಿದೆ. ಇದರೊಂದಿಗೆ ಅಡುಗೆ ಕೋಣೆಗೆ ತಾಗಿ ಮಕ್ಕಳ ಶೌಚಾಲಯ ಇದ್ದು ಸ್ವಚ್ಚತೆಗೆ ವ್ಯವಸ್ಥಿತ ಸೌಲಭ್ಯಗಳಿಲ್ಲದೇ ಇವೆಲ್ಲವೂ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀಳಲಿವೆ ಎಂದು ಪೋಷಕರು ಹೇಳಿದರು.
ಎಸ್ಡಿಎಂಸಿ ಸದಸ್ಯ ಹರೀಶ ದೇವಾಡಿಗ ಮಾತನಾಡಿ, ಈ ಹಿಂದೆ ಶಾಲೆಯ 150 ನೇ ವರ್ಷದ ಕಾರ್ಯಕ್ರಮದಲ್ಲಿ ಈ ಹಿಂದಿನ ಶಾಸಕರು ಹೊಸ ಕಟ್ಟಡದ ಮಾಡಿಕೊಡುವ ಭರವಸೆ ನೀಡಿದ್ದರು. ಈಗಿನ ಶಾಸಕರು ಸಹ ಅದನ್ನೇ ಮುಂದುವರೆಸಿದ್ದಾರೆಯೇ ಹೊರತಾಗಿ ಕಟ್ಟಡದ ಮಂಜೂರಿಗೆ ಇನ್ನು ಸ್ಪಂದಿಸಿಲ್ಲ.
ಇದರಿಂದ ಅನಾಹುತ ಸಂಭವಿಸಿದರೆ ಇದಕ್ಕೆ ಹೊಣೆ ಯಾರು, ಜೊತೆಗೆ ಮಕ್ಕಳ ಸಂಖ್ಯೆಗೆ ಭಾರಿ ಹೊಡೆತ ಬೀಳಲಿದೆ. ಇಲ್ಲಿಯ ತನಕ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಬಿಟ್ಟರೆ ಯಾರೊಬ್ಬರು ಭೇಟಿ ನೀಡಿಲ್ಲ.
ಈಗಾಗಲೇ ಒಂದು ವಾರದ ಹಿಂದೆ ಭಟ್ಕಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ ನಾಯ್ಕ, ಹಾಗೂ ಸಹಾಯಕ ಆಯುಕ್ತೆ ಮಮತಾ ದೇವಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಈ ಕುರಿತು ಇನ್ನು ತನಕ ಯಾವುದೇ ಸ್ಪಂದನೆ ಬಂದಿಲ್ಲ ವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಶೀಘ್ರ ಸಮಸ್ಯಗೆ ಪರಿಹಾರ ಸಿಗದಿದ್ದರೆ ಶಾಲೆ ಎದುರು ಧರಣಿ: ಶಾಲೆಯ ಕಟ್ಟಡದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಶಾಸಕರು ಭೇಟಿ ನೀಡಿ ಒಂದು ವಾರದೊಳಗಾಗಿ ಇದಕ್ಕೆ ಸ್ಪಂದಿಸಬೇಕು ಇಲ್ಲವಾದಲ್ಲಿ ಶಾಲಾ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಯ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಉದ್ಘಾಟಿಸಿದ ನಾಲ್ಕೇ ದಿನದಲ್ಲಿ ಬುಂದೇಲ್‌ಖಂಡ್ ಎಕ್ಸ್ಪ್ರೆಸ್ವೇನಲ್ಲಿ ಗುಂಡಿಗಳ ಹವಾ!