ಕಾರವಾರ (ಉತ್ತರ ಕನ್ನಡ): ಗಂಗಾವಳಿ ನದಿಯ ಪ್ರವಾಹದಲ್ಲಿ ಸಿಲುಕಿದ್ದ ಮದುವೆ ದಿಬ್ಬಣ ತುಂಬಿರುವ ವಾಹನದಲ್ಲಿದ್ದವರನ್ನು ಸ್ಥಳೀಯರು ರಕ್ಷಣೆ ಮಾಡಿ ಅಪಾಯದಿಂದ ಪಾರು ಮಾಡಿರುವ ಘಟನೆ ಅಂಕೋಲಾ ತಾಲೂಕಿನ ಶೀರೂರು ಬಳಿ ನಡೆದಿದೆ. ಗಂಗಾವಳಿ ನದಿ ಉಕ್ಕಿ ಹರಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 66 ಬಂದ್ ಆಗಿತ್ತು.
ಶೀರೂರು ಬಳಿ ಊರಿಗೆ ಊರೇ ಮುಳುಗಡೆಯಾಗಿದ್ದು, ಈ ವೇಳೆ ಮದುವೆ ದಿಬ್ಬಣದ ವಾಹನವೊಂದು ನೀರಿನಲ್ಲಿ ಸಿಲುಕಿಕೊಂಡಿತ್ತು. ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದಾಗ ವಾಹನ ನೀರಿನಲ್ಲಿ ಸಿಲುಕಿಕೊಂಡಿದ್ದು, ವಾಹನದಲ್ಲಿ ಮದುಮಗ ಸೇರಿ ಹದಿನೈದಕ್ಕೂ ಹೆಚ್ಚು ಜನ ಇದ್ದರು.
ಇದೇ ಸಂದರ್ಭದಲ್ಲಿ ಮೊಗಟಾ ಗ್ರಾಮ ಪಂಚಾಯಿತಿಯ ಆಂಧೆ ಗ್ರಾಮದ ಜನರನ್ನು ರಕ್ಷಿಸಲು ತೆರಳುತ್ತಿದ್ದ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ನಿರ್ದೇಶಕ ರಾಜು ಹರಿಕಂತ್ರ ಹಾಗೂ ಅವರ ಸ್ನೇಹಿತರ ತಂಡ, ವಾಹನದಲ್ಲಿ ಸಿಲುಕಿಕೊಂಡಿರುವ ಎಲ್ಲರನ್ನು ತಮ್ಮ ಜೀವದ ಹಂಗು ತೊರೆದು ದೋಣಿಯ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.