ಉಡುಪಿ: ರಾಮಮಂದಿರ ನಿರ್ಮಾಣ ಕಾರ್ಯ ಚಟುವಟಿಕೆ ಕುರಿತಾದಂತೆ ನವೆಂಬರ್ 10-11 ರಂದು ದೆಹಲಿಯಲ್ಲಿ ಸಂತ ಸಮಾವೇಶ ನಡೆಯಲಿದೆ. ರಾಮ ಮಂದಿರದ ಕೆಲಸಗಳ ಬಗ್ಗೆ ಸಮಾವೇಶದಲ್ಲಿ ಅಭಿಪ್ರಾಯ ಮಂಡಿಸಿ, ಚರ್ಚಿಸಲಿದ್ದೇವೆ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ ದೆಹಲಿಯಲ್ಲಿ ಸಂತ ಸಮಾವೇಶವನ್ನು ಆಯೋಜಿಸಿದ್ದು ಇದರಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. ದೇಶದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಪೇಜಾವರ ಮಠದ ಶಾಖೆಗಳಿದ್ದು ಕರ್ನಾಟಕದಿಂದ ಅಯೋಧ್ಯೆ, ಹರಿದ್ವಾರ-ಬದ್ರೀನಾಥ, ದೆಹಲಿ ಮುಂತಾದ ಕಡೆ ತೆರಳುವ ಧಾರ್ಮಿಕ ಪ್ರವಾಸಿಗರಿಗೆ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆಗಳನ್ನು ಹಿಂದಿನಿಂದ ಮಾಡುತ್ತಿದ್ದೇವೆ ಎಂದರು.
ಶಾಖಾ ಮಠಗಳ ಮೇಲುಸ್ತುವಾರಿಯನ್ನು ನೋಡಲು ಉತ್ತರ ಭಾರತದ ಪ್ರವಾಸ ಮಾಡುತ್ತಿದ್ದೇನೆ ಎಂದು ಪೇಜಾವರ ಸ್ವಾಮೀಜಿ ಇದೇ ಸಂದರ್ಭ ಮಾಹಿತಿ ನೀಡಿದರು. ತಮ್ಮ ಗುರುಗಳಾದ ವಿಶ್ವೇಶತೀರ್ಥ ಸ್ವಾಮೀಜಿಯವರು ವೃಂದಾವನಸ್ಥರಾದ ನಂತರ ಉತ್ತರ ಭಾರತದ ಮಠಗಳಿಗೆ, ಕ್ಷೇತ್ರಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇಂದಿನಿಂದ ಅಲ್ಲೆಲ್ಲ ಪ್ರವಾಸ ಮಾಡುವುದರ ಜೊತೆಗೆ ಸಮಾವೇಶದಲ್ಲಿ ಭಾಗಿಯಾಗುವುದಾಗಿ ಹೇಳಿದ್ದಾರೆ.