ಉಡುಪಿ: ಜಿಲ್ಲೆಯಲ್ಲಿ ಕೊರಗಜ್ಜನ ಕಾರಣಿಕ ಮತ್ತೊಮ್ಮೆ ಸದ್ದು ಮಾಡಿದೆ. ನಗರದ ಎಂಜಿಎಂ ಕಾಲೇಜು ಬಳಿ ಇರುವ ಕೊರಗಜ್ಜನ ಸನ್ನಿಧಾನದಲ್ಲಿ ಈ ದೈವದ ವಾಹನವಾಗಿರುವ ಆಮೆಯೊಂದು ಪ್ರತ್ಯಕ್ಷವಾಗಿದೆ.
ರಾತ್ರಿ ಕ್ಷೇತ್ರದ ಅರ್ಚಕ ಪೂಜೆಯ ವಿಧಿ ವಿಧಾನಕ್ಕೆಂದು ಹೊರ ಹೋಗಿ ವಾಪಸ್ ಬಂದು ದೈನಂದಿನ ಪೂಜೆಗೆಂದು ಮುಂದಾದಾಗ ಕೊರಗಜ್ಜನ ಮೂರ್ತಿ ಬಳಿ ಆಮೆಯೊಂದು ಕಂಡು ಬಂದಿದೆ. ಇದನ್ನ ಕಂಡು ಸನ್ನಿಧಿಯ ಅರ್ಚಕರಾದ ನವೀನ್ ಪಾತ್ರಿ ಅಶ್ಚರ್ಯಚಕಿತರಾಗಿದ್ದಾರೆ.
ಈ ಪ್ರದೇಶವು ನಗರದ ಮಧ್ಯದಲ್ಲಿದ್ದು, ಅಮೆಗಳು ವಾಸಿಸುವ ಪ್ರದೇಶವಲ್ಲ ಎಂಬುದು ವಿಶೇಷ. ಆಮೆಯನ್ನ ಬಕೆಟ್ ಒಂದರಲ್ಲಿ ಹಾಕಿ ರಾತ್ರಿ ಸನ್ನಿಧಿಯ ಪೂಜೆ ಮುಗಿಸಿ ಮಲಗಿದ ಅರ್ಚಕರು ಬೆಳೆಗೆದ್ದು ನೋಡಿದಾಗ ಆಮೆಯು ಮತ್ತೊಮ್ಮೆ ಕೊರಗಜ್ಜನ ಮೂರ್ತಿಯ ಕೆಳಗಡೆ ಹೋಗಿ ಕುಳಿತಿರುವುದು ಕಂಡು ಬಂದಿದೆ. ಸಾಧಾರಣವಾಗಿ ಅದು ನಿಂತಲ್ಲಿ ನಿಲ್ಲದ ಪ್ರಾಣಿ. ಆದ್ರೆ ಇಲ್ಲಿ ಬಂದಿರುವ ಅಮೆ ಕೊರಗಜ್ಜನ ಮೂರ್ತಿಯ ಬಳಿಯಿಂದ ಕದಲದೆ ನಿಂತಿರುವುದನ್ನು ಕಂಡು ಭಕ್ತರು ಕೂಡ ಆಶ್ಚರ್ಯ ಚಕಿತರಾಗಿದ್ದಾರೆ.
ಈ ವಿದ್ಯಮಾನ ಭಕ್ತರನ್ನು ರೋಮಾಂಚನಗೊಳಿಸಿದೆ. ಇನ್ನೂ ಕೆಲವೇ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಕೊರಗಜ್ಜನ ಕೋಲ ಮತ್ತು ಕ್ಷೇತ್ರದ ಜೀರ್ಣೋದ್ಧಾರ ನಡೆಯಲಿದೆ. ಇದಕ್ಕೂ ಮುನ್ನ ಕೊರಗಜ್ಜನ ವಾಹನವಾಗಿರುವ ಆಮೆ ಕಾಣಿಸಿಕೊಂಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಸದ್ಯ ಅದನ್ನು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.