ಉಡುಪಿ: ಮಾರತಿ ವೀಥಿಕಾ ಬಳಿ ಅಸಹಾಯಕ ಸ್ಥಿತಿಯಲ್ಲಿ ಕಾಣಿಸಿದ ಅಪರೂಪದ ಬಿಳಿ ಗೂಬೆಯನ್ನು ರಕ್ಷಿಸಲಾಗಿದೆ.
ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ಸುಧಾಕರ್ ದೇವಾಡಿಗ, ತಾರಾನಾಥ್ ಮೇಸ್ತ ಶಿರೂರು ಅವರು ಗೂಬೆಯನ್ನು ರಕ್ಷಿಸಿ ಅರಣ್ಯ ರಕ್ಷಕ ದೇವರಾಜ್ ಪಾಣ ಅವರ ವಶಕ್ಕೆ ನೀಡಿದ್ದಾರೆ. ಪಕ್ಷಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಮುಖವಾದ ಬಳಿಕ ಪರಿಸರಕ್ಕೆ ಬಿಡುವುದಾಗಿ ಅವರು ಹೇಳಿದ್ದಾರೆ. ರಕ್ಕೆ ಗಾಯಗೊಂಡು ಹಾರಲಾಗದ ಸ್ಥಿತಿಯಲ್ಲಿದ್ದ ಗೂಬೆ, ಬೆಕ್ಕು-ಬೀದಿ ನಾಯಿಗಳಿಂದ ರಕ್ಷಿಸಿಕೊಳ್ಳಲು ಅಂಗಡಿಯೊಂದರ ಬಾಗಿಲ ಬಳಿ ಮುದುಡಿ ಕುಳಿತಿತ್ತು. ಇದನ್ನು ಅಂಗಡಿ ಮಾಲಿಕ ಸುಧಾಕರ ದೇವಾಡಿಗ ಗಮನಿಸಿ ರಕ್ಷಿಸಿದ್ದಾರೆ.
ಪರಿಸರದಲ್ಲಿ ಹೆಚ್ಚಾಗಿ ಕಂದು ಬಣ್ಣದ ಗೂಬೆಗಳು ಕಂಡು ಬರುತ್ತವೆ. ಬಿಳಿ ಬಣ್ಣದ ಗೂಬೆಗಳು ಅವನತಿಯ ಅಂಚಿನಲ್ಲಿವೆ. ಕಂದು ಗೂಬೆ ಅಪಶಕುನ, ಬಿಳಿ ಗೂಬೆ ಶುಭಫಲ ಎಂಬ ನಂಬಿಕೆಯೂ ಇದೆ. ಮನೆಯಲ್ಲಿ ಒಳಿತಾಗುವ ನಂಬಿಕೆಯಿಂದ ಬಿಳಿ ಗೂಬೆಯನ್ನು ಸಾಕುವವರೂ ಇದ್ದಾರೆ. ಬಿಳಿ ಗೂಬೆಯನ್ನು 'ಬಾರನ್ ಔಲ್' ಎಂದು ಕರೆಯಲಾಗುತ್ತದೆ. ಸಂಸ್ಕ್ರತದಲ್ಲಿ ಗೂಬೆಗೆ ಉಲೂಕಾ ಎಂದು ಹೇಳಲಾಗುತ್ತದೆ.