ಉಡುಪಿ: 12 ವರ್ಷದ ಪಿತ್ರೋಡಿಯ ಬಾಲಕಿಯೋರ್ವಳು ಯೋಗಾಸನದಲ್ಲಿ ಅತ್ಯಪೂರ್ವ ಸಾಧ್ಯತೆಗಳನ್ನು ಪ್ರದರ್ಶನ ಮಾಡುವ ಮೂಲಕ ಜಗತ್ತೇ ಹುಬ್ಬೇರುವಂತೆ ಮಾಡಿ 'ಗೋಲ್ಡ್ನ್ ಗರ್ಲ್' ಎಂಬ ಪ್ರಖ್ಯಾತಿ ಪಡೆದಿದ್ದಾಳೆ. ಇದೀಗ ಮತ್ತೊಂದು ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾಳೆ.
ಜಿಲ್ಲೆಯ ಉದ್ಯಾವರದ ಪಿತ್ರೋಡಿ ನಿವಾಸಿ, ತಂದೆ ಉದಯ್ ಮತ್ತು ತಾಯಿ ಸೌಮ್ಯ ದಂಪತಿ ಪುತ್ರಿ ತನುಶ್ರೀ ಪಿತ್ರೋಡಿ ಎಂಬಾಕೆ ಯೋಗಾಸನದಲ್ಲಿ ಅತ್ಯದ್ಭುತವಾದ ಸಾಧನೆ ಮಾಡುತ್ತಿದ್ದಾಳೆ. ಬಾಲಕಿ ಉಡುಪಿಯ ಸೈಂಟ್ ಸಿಸಿಲಿಸ್ ಪ್ರೌಢಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದು, ಕಲಿಕೆಯ ಜೊತೆಗೆ ಯೋಗಾಸನದಲ್ಲಿ ದಾಪುಗಾಲಿಡುತ್ತಿದ್ದಾಳೆ.
ಈ ಪುಟ್ಟ ಬಾಲಕಿ ತನಗೆ ಬೇಕಾದ ಆಕಾರದಲ್ಲಿ ದೇಹವನ್ನು ಬಗ್ಗಿಸುವ ಚಾಕಚಕ್ಯತೆ ಹೊಂದಿದ್ದು, ಯೋಗಾಸನದಲ್ಲಿನ ಅಸಾಧ್ಯ ಭಂಗಿಗಳನ್ನು ಲೀಲಾಜಾಲವಾಗಿ ಮಾಡುವ ಸಾಮರ್ಥ್ಯ ಹೊಂದಿದ್ದಾಳೆ. ಸದ್ಯ ನಮಗಿಲ್ಲಿ ಕಾಣುತ್ತಿರುವ ವಿಸ್ಮಯಕಾರಿ ದೇಹ ಚಲನೆಗೆ ‘ಮೋಸ್ಟ್ ಬ್ಯಾಕ್ವರ್ಡ್ ಬಾಡಿ ಸ್ಕಿಪ್’ ಎಂದು ಕರೆಯುತ್ತಾರೆ. ಪರಸ್ಪರ ಜೋಡಿಸಿದ ಎರಡು ಕೈಗಳನ್ನು ವೃತ್ತಾಕಾರದಲ್ಲಿ ಇಡೀ ದೇಹಕ್ಕೆ ಸುತ್ತು ತರುವುದಾಗಿದೆ. ಈ ಅಪೂರ್ವ ಆಸನವನ್ನು ಪ್ರದರ್ಶಿಸುವ ಮೂಲಕ ತನುಶ್ರೀ 6ನೇ ವಿಶ್ವದಾಖಲೆ ಮಾಡಿದ್ದಾಳೆ. ಒಂದೇ ನಿಮಿಷದಲ್ಲಿ 55 ಬಾರಿ ಈ ಆಸನವನ್ನು ಪ್ರದರ್ಶಿಸಿ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ನೂತನ ದಾಖಲೆ ಬರೆದಿದ್ದಾಳೆ.
ಓದಿ: ಸರಗೂರಲ್ಲಿ ಕಾಡಾನೆ ತುಳಿತಕ್ಕೆ ಕೇರಳದ ವ್ಯಕ್ತಿ ಬಲಿ!
ತನುಶ್ರೀ ರೀತಿ ಯಾರು ಮಾಡಿಲ್ಲ:
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಪ್ರತಿನಿಧಿ ಹೇಳುವಂತೆ, ಇಂತಹ ಪ್ರಯತ್ನವನ್ನು ಈವರೆಗೆ ಯಾರೂ ಮಾಡಿಲ್ಲ. ದುಬೈನ ಬಾಲಕಿಯೊಬ್ಬಳು ಮುಂಬದಿಗೆ ಬಾಗಿ ಈ ಆಸನವನ್ನು ಪ್ರದರ್ಶಿಸಿದ್ದಳು. ತನುಶ್ರೀ ಮಾಡಿರುವ ದಾಖಲೆಗೆ ಇದು ಸರಿಸಾಟಿಯಲ್ಲ. ಆಕೆ ನಿಮಿಷಕ್ಕೆ ಕೇವಲ 32 ಬಾರಿ ಸುತ್ತು ಮಾಡಿದ್ದರೆ, ತನುಶ್ರೀ 52 ಸಲ ಸುತ್ತು ಬಂದಿದ್ದಾಳೆ. ಅದರಲ್ಲೂ ಬಾಲಕಿ ಮಾಡಿರುವ ಈ ಆಸನ ತುಂಬಾ ಕ್ಲಿಷ್ಟಕರವಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.
ದಾಖಲೆ ಬರೆಯೋದ್ರಲ್ಲಿ ತನುಶ್ರೀ ಎತ್ತಿದ ಕೈ:
ದಾಖಲೆ ಬರೆಯುವುದು ತನುಶ್ರೀಗೆ ಹೊಸ ವಿಚಾರ ಅಲ್ಲ. 2017ರಲ್ಲಿ ನಿರಾಲಂಬ ಪೂರ್ಣ ಚಕ್ರಾಸನ ಎಂಬ ಕಠಿಣ ಯೋಗಾಸನವನ್ನು ಒಂದು ನಿಮಿಷದಲ್ಲಿ 19 ಬಾರಿ ಮಾಡಿದ್ದಳು. 2018ರಲ್ಲಿ ಮೋಸ್ಟ್ ಫುಲ್ ಬಾಡಿ ರೆವಲ್ಯೂಷನ್ ಮೇಂಟೇನಿಂಗ್ ಎ ಚೆಸ್ಟ್ ಸ್ಟ್ಯಾಂಡ್ ಪೊಸಿಶನ್ ಭಂಗಿಯನ್ನು ಒಂದು ನಿಮಿಷದಲ್ಲಿ 42 ಬಾರಿ ಪ್ರದರ್ಶಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಲ್ಲಿ ಸಾಧನೆ ದಾಖಲಿಸಿದ್ದಳು. 2019ರಲ್ಲಿ ಮೋಸ್ಟ್ ನಂಬರ್ ಆಫ್ ರೋಲ್ಸ್ ಇನ್ ಒನ್ ಮಿನಿಟ್ ಇನ್ ಧನುರಾಸನ ಪೋಸ್ಚರ್ ಹಾಗೂ 2020 ರಲ್ಲಿ ಚಕ್ರಾಸನ ರೇಸ್ ವಿಭಾಗದಲ್ಲಿ 100 ಮೀಟರ್ ಅಂತರವನ್ನು 1.14 ಸೆಕೆಂಡ್ ಕ್ರಮಿಸಿ ವಿಶ್ವ ದಾಖಲೆ ಮಾಡಿದ್ದಾಳೆ. ಈ ಪುಟ್ಟ ಬಾಲೆಯ ದೊಡ್ಡ ಸಾಧನೆಯನ್ನು ಕೇವಲ ಕರಾವಳಿ ಮಾತ್ರವಲ್ಲ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ.