ಉಡುಪಿ: ಇಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದ ಸಂತ್ರಸ್ತ ಕೊರಗ ಕುಟುಂಬದ ವಿವಾಹ ಸಮಾರಂಭದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗಿಯಾಗಿದ್ದರು.
ಈ ವೇಳೆ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಗ್ರಾಮದಲ್ಲಿ ಕೊರಗ ಕುಟುಂಬದ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸೂಚಿಸಲಾಗಿದೆ. ದೌರ್ಜನ್ಯ ಎಸಗಿದ ಪಿಎಸ್ಐ ಅಮಾನತು ಸೇರಿದಂತೆ 5 ಕ್ಕೂ ಹೆಚ್ಚು ಪೊಲೀಸರನ್ನು ವರ್ಗಾವಣೆ ಮಾಡಿದ್ದು, ಮೇಲಾಧಿಕಾರಿಗಳಿಂದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೊರಗ ಜನಾಂಗದ ಕುಟುಂಬಗಳನ್ನು ನಾನು ಹತ್ತಿರದಿಂದ ಕಂಡಿದ್ದು, ಅವರೆಲ್ಲರ ಆತ್ಮೀಯತೆ ಗಳಿಸಿದ್ದೇನೆ. ನನ್ನೂರ ಭಾಗದಲ್ಲಿ ಇರುವಂತಹ ಏಕೈಕ ಕೊರಗರ ಕೇರಿ ಇದಾಗಿದ್ದು, ಈ ಮುಗ್ಧ ಜನರ ಮೇಲೆ ಹಲ್ಲೆ ನಡೆದಿರುವುದು ನೋವಿನ ಸಂಗತಿ. ವಿವಾಹದ ಕಾರ್ಯಕ್ರಮವೆಲ್ಲ ಮುಗಿದ ನಂತರ ತಡರಾತ್ರಿ ಆದರೂ ಸಂತ್ರಸ್ಥ ಕುಟುಂಬದವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದೇನೆ ಎಂದರು.
ಇನ್ನು ವಿವಾಹ ಸಮಾರಂಭಕ್ಕೆ ಸಚಿವರು ಆಗಮಿಸುತ್ತಿದ್ದಂತೆ ನೂರಾರು ಆದಿವಾಸಿ ಕೊರಗ ಜನಾಂಗದವರು ಡೊಳ್ಳು ಮತ್ತು ಚಂಡೆಗಳ ಮೂಲಕ ಸಚಿವರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಂಡು ಸ್ವಾಗತ ನೀಡಿದರು. ಈ ವೇಳೆ, ಕುಮಟಾದ ಹಿರಿಯ ಬಿಜೆಪಿ ಪ್ರಮುಖರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಮತಾಂತರ ನಿಷೇಧ ವಿಧೇಯಕ ಶೀಘ್ರವೇ ಕಾಯ್ದೆಯಾಗಿ ಜಾರಿಗೆ ಬರಲಿ: ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿ