ಉಡುಪಿ: ಜಿಲ್ಲೆಯ ರೈತರಿಗೆ ಭತ್ತದ ಕಟಾವು ಮಾಡಿಸೋದೇ ದೊಡ್ಡ ತಲೆ ನೋವಾಗಿದೆ. ಜಿಲ್ಲಾಡಳಿತ ಕಟಾವು ಯಂತ್ರಕ್ಕೆ ದರ ನಿಗದಿ ಮಾಡಿದ್ರೂ, ಖಾಸಗಿಯವರು ಮಾತ್ರ ಕ್ಯಾರೇ ಅಂತಿಲ್ಲ. ಕಟಾವು ಮಾಡಬೇಕಾದ್ರೆ ಹೆಚ್ಚಿನ ದರ ಕೊಡಿ ಅಂತ ಕಡ್ಡಿ ಮುರಿದ ಹಾಗೆ ಹೇಳ್ತಿದ್ದಾರೆ. ಇದರಿಂದ ಬೆಳೆದ ಭತ್ತವನ್ನು ಕೊಯಿಲು ಮಾಡೋದು ಹೇಗೆ ಅನ್ನೋದು ಅನ್ನದಾತರ ಗೋಳಾಗಿದೆ.
ಉಡುಪಿ ಜಿಲ್ಲೆಯಲ್ಲಿ ಸದ್ಯ ಭತ್ತ ಬೆಳೆಯುವ ರೈತರಿಗೆ ಬೆಳೆದ ಭತ್ತವನ್ನು ಕಟಾವು ಮಾಡೋದೆ ದೊಡ್ಡ ಸಮಸ್ಯೆಯಾಗಿದೆ. ಹೌದು, ಭತ್ತ ಕಟಾವು ಮಾಡೋಕೆ ಕೂಲಿಯಾಳುಗಳು ಸಿಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಜಿಲ್ಲೆಯ ರೈತರು ಭತ್ತ ಕಟಾವು ಯಂತ್ರದ ಮೇಲೆ ಅವಲಂಬಿತರಾಗಿದ್ದಾರೆ.
ಜಿಲ್ಲೆಯ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ 8 ಕಟಾವು ಯಂತ್ರಗಳು ಲಭ್ಯವಿದ್ದು, ಇವು ಸಾಕಾಗುತ್ತಿಲ್ಲ. ಹೀಗಾಗಿ ಹೊರ ರಾಜ್ಯದಿಂದ ಬರುವ ಖಾಸಗಿ ಕಟಾವು ಯಂತ್ರಗಳನ್ನು ಅವಲಂಬಿಸುವ ಅನಿವಾರ್ಯತೆ ಇಲ್ಲಿನ ರೈತರಿಗೆ ಎದುರಾಗಿದೆ. ಆದರೆ ಖಾಸಗಿ ಯಂತ್ರಗಳು ದರದಲ್ಲಿ ಬಾರಿ ಏರಿಕೆ ಮಾಡಿದೆ. ಇದಕ್ಕಾಗಿ ಜಿಲ್ಲಾಡಳಿತ 1,800 ರೂ. ನಿಗದಿ ಮಾಡಿದೆ. ಆದ್ರೆ ಖಾಸಗಿ ಕಟಾವು ಯಂತ್ರದವರು ಮಾತ್ರ ಜಿಲ್ಲಾಡಳಿತದ ನಿಗದಿತ ದರ ಧಿಕ್ಕರಿಸಿ 2,500 ರಿಂದ 3,300ರ ವರೆಗೂ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ರೈತರದ್ದು.
ಇದನ್ನೂ ಓದಿ: ರೈತರ ಕೈ ಸೇರದ ಪರಿಹಾರ.. ಸರ್ಕಾರದ ವಿರುದ್ಧ ಅಥಣಿ ರೈತರ ಆಕ್ರೋಶ
ಈಗಾಗಲೇ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಹಲವು ಕಡೆಗಳಲ್ಲಿ ಬೆಳೆ ಹಾನಿಯಾಗಿದೆ. ಉಳಿದ ಅಲ್ಪ ಸ್ವಲ್ಪ ಬೆಳೆಯನ್ನಾದರೂ ಕೊಯಿಲು ಮಾಡುವ ಅಂತ ಅನ್ನದಾತರು ಅಂದ್ಕೊಂಡ್ರೆ ದರ ಏರಿಕೆಯೇ ದೊಡ್ಡ ತಲೆನೋವಾಗಿದೆ. ದೊಡ್ಡ ಮೊತ್ತದ ದರವನ್ನು ನೀಡಿ ಕಟಾವು ಮಾಡಿದ್ರೆ, ಲಾಭ ದೂರದ ಮಾತು ಅಸಲು ಕೂಡ ಬರುವುದಿಲ್ಲ ಅನ್ನೋದು ರೈತರ ಗೋಳು. ಮಧ್ಯವರ್ತಿಗಳ ಹಾವಳಿಯಿಂದಲೇ ಈ ರೀತಿಯ ಬೆಲೆ ಏರಿಕೆ ಆಗಿದೆ ಎಂದು ರೈತರು ಆರೋಪಿಸಿದ್ದಾರೆ.
ಪ್ರಸ್ತುತ ಈ ಸನ್ನಿವೇಶದ ಪ್ರಯೋಜನ ಪಡೆದು ಖಾಸಗಿ ಕಂಬೈನ್ಡ್ ಹಾರ್ವೆಸ್ಟರ್ ಮಾಲೀಕರು ಸ್ಥಳೀಯ ಮಧ್ಯವರ್ತಿಗಳೊಂದಿಗೆ ಸೇರಿ ರೈತರಿಂದ ಹೆಚ್ಚಿನ ಬಾಡಿಗೆ ದರವನ್ನು ಪಡೆಯುತ್ತಿರುವ ಬಗ್ಗೆ ರೈತ ಸಂಘಟನೆಗಳು ಹಾಗೂ ರೈತರಿಂದ ನಿರಂತರವಾಗಿ ಜಿಲ್ಲಾಡಳಿತಕ್ಕೆ ದೂರುಗಳು ಬರುತ್ತಿವೆ.