ಉಡುಪಿ: ವರುಣನ ರೌದ್ರ ನರ್ತನ ಜೋರಾಗಿರುವ ಹಿನ್ನೆಲೆಯಲ್ಲಿ ದೊಡ್ಡಣಗುಡ್ಡೆ, ಪೆರಂಪಳ್ಳಿ ಪ್ರದೇಶದಲ್ಲಿ ಎನ್ಡಿಆರ್ಎಫ್ ಕಾರ್ಯಾಚರಣೆ ನಡೆಸುತ್ತಿದೆ. ಮೋಟಾರ್ ಬೋಟ್ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಪಾಸ್ಕ್ ಕುದ್ರುವಿನಲ್ಲಿನ ಕುಟುಂಬಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್ಡಿಆರ್ಎಫ್ ತಂಡ ನಿರತವಾಗಿದೆ. ಉಡುಪಿಯ ಪೆರಂಪಳ್ಳಿಯಲ್ಲಿ ಸುವರ್ಣ ನದಿಯ ರೌದ್ರ ನರ್ತನ ಮಿತಿಮೀರಿದೆ. ಹಲವಾರು ದ್ವೀಪಗಳನ್ನು ಮುಳುಗಿಸಿರುವ ಸುವರ್ಣಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.
ಹತ್ತನೇ ಬೆಟಾಲಿಯನ್ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಟೀಮ್ ಕಮಾಂಡರ್ ಗೋಪಾಲ್ ಮೀನಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಚಿನ ನೆರವಿಗಾಗಿ ಎರಡು ಹೆಲಿಕಾಪ್ಟರುಗಳನ್ನು ಕೇಂದ್ರ ಸರ್ಕಾರ ರವಾನಿಸಿದೆ. ಕಾರವಾರದಿಂದ ಉಡುಪಿಗೆ ಬರಲಿರುವ ಹೆಲಿಕಾಪ್ಟರ್ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಲಿವೆ.