ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿ ಜಿ.ಜಗದೀಶ್ ಫೀಲ್ಡಿಗಿಳಿದು ಮಾಸ್ಕ್ ಹಾಕದವರನ್ನು ತರಾಟೆಗೆ ತೆಗೆದುಕೊಂಡು ದಂಡ ವಿಧಿಸಿದರು.
ತಾಲೂಕಿನ ಸಂತೆಕಟ್ಟೆಯಲ್ಲಿ ಮಾಸ್ಕ್ ಹಾಕದವರ ಮೇಲೆ ದಂಡ ಹಾಕಿದರು. ಅಲ್ಲದೆ, ಪ್ರಯಾಣಿಕರನ್ನ ತುಂಬಿ ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಬಸ್ಸುಗಳನ್ನು ತಡೆದು ದಂಡದ ಜೊತೆಗೆ ಚಾಲಕ ಹಾಗೂ ನಿರ್ವಾಹಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ ನೀಡಿದರು. ಅಲ್ಲದೆ, ಅಂಗಡಿ ಮಾಲೀಕರು, ಮೆಡಿಕಲ್, ಬ್ಯಾಂಕ್ಗಳಿಗೆ 5 ಸಾವಿರ ರೂ. ದಂಡ ವಿಧಿಸಿದರು.
ಹೆಚ್ಚುವರಿ ಪ್ರಯಾಣಿಕರನ್ನ ಕರೆದುಕೊಂಡು ಹೋಗುತ್ತಿದ್ದ ಬಸ್ಸುಗಳನ್ನ ನಿಲ್ಲಿಸಿ ಪ್ರಯಾಣಿಕರನ್ನ ಕೆಳಗಿಳಿಸಿದ್ರು. ಕೊನೆ ಬಸ್ಸು ಎಂದು ಸಬೂಬು ಹೇಳಿದ ವಿದ್ಯಾರ್ಥಿಗಳಿಗೆ ಡಿಸಿ ಕ್ಲಾಸ್ ತೆಗೆದುಕೊಂಡ್ರು. ಬಸ್ಸಿನಿಂದ ಕೆಳಗಿಳಿಸಿ ತೆರಳಿದ ಡಿಸಿ ನಡೆಯ ವಿರುದ್ಧ ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸಿದ್ರು.
ಬಸ್ಸುಗಳಿಗೆ ಕಾಯುವ ತಾಳ್ಮೆ ವಿದ್ಯಾರ್ಥಿಗಳಿಗೆ ಇಲ್ಲ. ಇನ್ಮುಂದೆ ಹೆಚ್ಚುವರಿ ಪ್ರಯಾಣಿಕರನ್ನ ಕರೆದುಕೊಂಡು ಹೋದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಪ್ರಯಾಣಿಕರು ನಿಂತು ಪ್ರಯಾಣ ಮಾಡಬಾರದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರತಿಕ್ರಿಯೆ ನೀಡಿದರು.