ಉಡುಪಿ: ಖಾತೆ ಹಂಚಿಕೆ ಗೊಂದಲ, ಮೂಲ ಬಿಜೆಪಿಗರ ಅಸಮಾಧಾನ, ಬಜೆಟ್ ಟೆನ್ಶನ್ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಟೆಂಪಲ್ ಟೂರ್ ನಡೆಸಿದ್ದಾರೆ. ಉಡುಪಿ ಜಿಲ್ಲೆಯ ಮೂರು ದೇವಸ್ಥಾನ ಒಂದು ಮಠದ ದರ್ಶನ ಮಾಡಿದ್ದಾರೆ. 1008 ಕಾಯಿ ಗಣಹೋಮದಲ್ಲಿ ಭಾಗಿಯಾಗಿ ಪುಣ್ಯ ವೃದ್ಧಿ ಮಾಡಿಕೊಂಡರು.
ಬೆಳಗ್ಗೆ ಉಡುಪಿ ಐಬಿಯಿಂದ ಪ್ರವಾಸ ಆರಂಭಿಸಿದ ಸಿಎಂ, ಕಾಪು ತಾಲೂಕಿನ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ಈ ವೇಳೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ಹೆಜಮಾಡಿ ಮೀನುಗಾರಿಕಾ ಬಂದರಿನ ಶಿಲಾನ್ಯಾಸ ನಡೆಸಿದರು. 184 ಕೋಟಿ ರೂಪಾಯಿ ವೆಚ್ಚದ ಮೀನುಗಾರಿಕಾ ಬಂದರಿಗೆ ಶಿಲಾನ್ಯಾಸ ನಡೆಸಿದರು.
ಕಾಪುವಿನಲ್ಲಿ ಕಾರು ಹತ್ತಿದ ಸಿಎಂ, ಕುಂದಾಪುರ ತಾಲೂಕಿನ ಕುಂಭಾಸಿಗೆ ಆಗಮಿಸಿದರು. ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು. ಪುತ್ರ ಸಂಸದ ರಾಘವೇಂದ್ರ, ಶೋಭಾ ಕರಂದ್ಲಾಜೆ, ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹಾಗು ಕಲ್ಲಡ್ಕ ಪ್ರಭಾಕರ ಭಟ್ ಸಾಥ್ ಕೊಟ್ಟರು.
ಉಡುಪಿಯ ಗೋಪಾಡಿಯ ರಾಘವೇಂದ್ರ ರಾವ್ ಕುಟುಂಬ ಕುಂಭಾಶಿ ವಿನಾಯಕ ದೇವಸ್ಥಾನದಲ್ಲಿ ಗಣಹೋಮ ಆಯೋಜಿಸಿತ್ತು. 55 ವರ್ಷಗಳಿಂದ ಒಡನಾಟ ಹೊಂದಿರುವ ಯಡಿಯೂರಪ್ಪ, 1008 ಕಾಯಿಗಳಿಂದ ಮಾಡುತ್ತಿದ್ದ ಗಣ ಹೋಮದಲ್ಲಿ ಪಾಲ್ಗೊಂಡರು. ಹೋಮ ನಡೆಯುತ್ತಿದ್ದಾಗ ಯಜ್ಞಶಾಲೆಗೆ ಆಗಮಿಸಿದ ಸಿಎಂ ಪೂರ್ಣಾಹುತಿಯವರಿಗೆ ಯಾಗದಲ್ಲಿ ಪಾಲ್ಗೊಂಡರು. ಗಣಹೋಮದ ನಂತರ ವಿನಾಯಕನಿಗೆ ಮಹಾಪೂಜೆ ನೆರವೇರಿಸಿ, ಮಾಧ್ಯಮಗಳ ಜೊತೆ ಮಾತನಾಡಿದರು. ರಾಜ್ಯದ ಸುಭಿಕ್ಷೆ-ಜನರ ಒಳಿತಿಗಾಗಿ ಧಾರ್ಮಿಕ ಪ್ರವಾಸ ನಡೆಸಿರುವುದಾಗಿ ಹೇಳಿದರು.
ಅಧಿಕಾರ ವಹಿಸಿಕೊಂಡ ದಿನದಿಂದ ಸವಾಲುಗಳ ಸಾಲನ್ನೇ ಎದುರಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಪಾಲಿಟಿಕ್ಸ್ ಮರೆತು ದೇವಸ್ಥಾನ ಸುತ್ತಿದ್ದಾರೆ. ಶ್ರೀಕೃಷ್ಣ ಮುಖ್ಯಪ್ರಾಣ, ವೆಂಕಟರಮಣ ಮಹಾಲಕ್ಷ್ಮಿ, ಕುಂಭಾಸಿ ಗಣಪತಿ, ಚಂಡಿಕಾ ದುರ್ಗಾಪರಮೇಶ್ವರಿ ಕೃಪೆ ತೋರಿ ಪೂರ್ಣಾವಧಿ ಸಿಎಂ ಕುರ್ಚಿ ಉಳಿಸುತ್ತಾರಾ? ರಾಜಕೀಯ ಮೇಲಾಟದಲ್ಲಿ ಸದ್ಯ ಈ ಪ್ರಶ್ನೆಗೆ ಉತ್ತರ ಇಲ್ಲ.