ಉಡುಪಿ: ನಗರಸಭೆಯ ಕಸ ವಿಲೇವಾರಿ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ಉಡುಪಿ ನಗರಸಭೆ ಖಡಕ್ ನಿರ್ಣಯ ತೆಗೆದುಕೊಂಡಿದೆ. ಉಡುಪಿ ನಗರಸಭೆಯಲ್ಲಿ ನಡೆದ ತುರ್ತು ಖಂಡನಾ ನಿರ್ಣಯ ಸಭೆಯಲ್ಲಿ ಆರೋಪಿಗಳಿಗೆ ಸಂಬಂಧಿಸಿದ ಆಸ್ಮಾ ಕ್ಯಾಸೆಟ್ ಕಾರ್ನರ್ ಅಂಗಡಿಯ ವ್ಯಾಪಾರ ಪರವಾನಗಿ ರದ್ದು ಮಾಡಲು ತೀರ್ಮಾನಿಸಲಾಗಿದೆ.
ನಗರಸಭೆ ಅಧಿಕಾರಿಗಳು, ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ಗುತ್ತಿಗೆ ನೌಕರರ ರಕ್ಷಣೆಗೆ ಆಡಳಿತ ವಿಭಾಗ ಬದ್ಧವಾಗಿದೆ. ಕೆಲವರು ಅನಗತ್ಯವಾಗಿ ನಗರಸಭೆ ವಿರುದ್ಧ ಪೌರಕಾರ್ಮಿಕರನ್ನು ಎತ್ತಿಕಟ್ಟುವ ಕಾರ್ಯ ಮಾಡುತ್ತಿದ್ದಾರೆ. ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಈ ಎಲ್ಲಾ ಷಡ್ಯಂತ್ರಕ್ಕೆ ಅವಕಾಶ ನೀಡದಂತೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
ಓದಿ:ಪೌರ ಕಾರ್ಮಿಕನ ಮೇಲೆ ಅಂಗಡಿ ಮಾಲೀಕನಿಂದ ಹಲ್ಲೆ! ವಿಡಿಯೋ...
ಈ ಸಂದರ್ಭದಲ್ಲಿ ಶಾಸಕ ರಘುಪತಿ ಭಟ್ ಮಾತನಾಡಿ, ಸರ್ಕಾರಿ ಅಧಿಕಾರಿಗಳ ವಿರುದ್ಧ ದುವರ್ತನೆ ತೋರಿದರೆ ಪಕ್ಷಭೇದವಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಪ್ರತಿಪಕ್ಷದ ಸದಸ್ಯರು ಬೀದಿಯಲ್ಲಿ ನಿಂತು ಮಾತನಾಡುವ ಬದಲು ಅಧಿವೇಶನಕ್ಕೆ ಬಂದು ತಮ್ಮ ಅಭಿಪ್ರಾಯ ಮಂಡಿಸಬೇಕಿತ್ತು ಎಂದರು.