ಉಡುಪಿ: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಅತ್ರಾಡಿ ಗ್ರಾಮದ ಮದಗ ಮುಳ್ಳಗುಜ್ಜೆ ಎಂಬಲ್ಲಿ ವಾಸವಾಗಿದ್ದ ಚೆಲುವಿ (28) ಮತ್ತು ಅವರ 10 ವರ್ಷ ವಯಸ್ಸಿನ ಮಗಳನ್ನು ಮೇ 8ರ ರಾತ್ರಿ ಅಪರಿಚಿತರು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗಿ 48ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಹರೀಶ ಆರ್ ಯಾನೆ ಗಣೇಶ (29) ಬಂಧಿತ ಆರೋಪಿ.
ಆರೋಪಿ ಹರೀಶ ಮೃತ ಚೆಲುವಿಯ ದೂರದ ಸಂಬಂಧಿಯಾಗಿದ್ದು, ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಚೆಲುವಿ ಗಂಡನಿಂದ ದೂರವಾಗಿರುವುದರಿಂದ ಇದೇ ಅವಕಾಶವನ್ನು ಉಪಯೋಗಿಸಿಕೊಂಡು ಆಕೆಯ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ. ಅಲ್ಲದೆ ಚೆಲುವಿಯನ್ನು ಮದುವೆ ಆಗಬೇಕೆಂದು ಒತ್ತಾಯಿಸುತ್ತಿದ್ದ ಎಂದು ತಿಳಿದುಬಂದಿದೆ. ಚೆಲುವಿಯು ಬೇರೆಯವರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಳೆ ಎಂಬ ಸಂಶಯದಿಂದ ಮೇ 8ರ ರಾತ್ರಿ ಅವರ ಮನೆಗೆ ತೆರಳಿ ಊಟ ಮಾಡಿ ಮಗಳು ಮಲಗಿದ ಬಳಿಕ ಚೆಲುವಿ ಬೇರೆಯವರೊಂದಿಗೆ ಫೋನ್‌ನಲ್ಲಿ ಸಂಪರ್ಕದಲ್ಲಿರುವ ವಿಚಾರವಾಗಿ ಗಲಾಟೆ ಮಾಡಿದ್ದನಂತೆ.
ನಂತರ ಚೆಲುವಿ ಮಲಗಿದ್ದ ವೇಳೆ ಶಾಲಿನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ನಂತರ ನಿದ್ರೆಯಲ್ಲಿದ್ದ ಮಗಳು ತನ್ನ ವಿರುದ್ಧ ಸಾಕ್ಷಿ ಹೇಳಬಹುದೆಂದು ಅವಳನ್ನು ಕೂಡಾ ಶಾಲಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಚೆಲುವಿಯ ಕುತ್ತಿಗೆಯಲ್ಲಿದ್ದ ಸುಮಾರು 50,000ರೂ. ಮೌಲ್ಯದ ಚಿನ್ನದ ಸರ ಹಾಗೂ ಅವರು ಉಪಯೋಗಿಸುತ್ತಿದ್ದ ಮೊಬೈಲ್ ಫೋನ್ಅನ್ನು ತೆಗೆದುಕೊಂಡು ಹೋಗಿದ್ದ.
ಇದನ್ನೂ ಓದಿ: ಯುವಕನ ಮೇಲೆ ಮುರಿದುಬಿದ್ದ ಮರದ ಕೊಂಬೆ: ತಪ್ಪಿದ ದುರಂತ
ಈ ಪ್ರಕರಣವನ್ನು ಶೀಘ್ರವಾಗಿ ಭೇದಿಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ವಿಷ್ಣುವರ್ಧನ ಎನ್ ಅವರು ಹಿರಿಯಡ್ಕ ಪೊಲೀಸ್ ತಂಡವನ್ನು ಅಭಿನಂದಿಸಿದ್ದಾರೆ.