ತುಮಕೂರು: ಕುಡಿಯಲು ಹಾಲು ಸಿಗುವ ಮಾರ್ಗದಲ್ಲಿ ಬಿ.ಎಸ್.ಯಡಿಯೂರಪ್ಪನವರು ಸಾಗುತ್ತಿದ್ದಾರೆ ಎಂದು ನೂತನ ಸಚಿವ ಸೋಮಣ್ಣ ಹೇಳಿದರು.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಡಿಯೂರಪ್ಪನವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಹಿರಿಯ ರಾಜಕಾರಣಿ. ಇದುವರೆಗೂ ಸಮರ್ಥವಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ. ನನ್ನನ್ನು, ನಿಮ್ಮನ್ನು ನೋಡಿದ್ರೆ ಹಾಲು ಸಿಗುತ್ತದೆಯೇ?, ಸಿಗುವುದಿಲ್ಲ. ಹೀಗಾಗಿ ಬಿಎಸ್ವೈ ಈಗ ಅವರದ್ದೇ ಆದ ಮಾರ್ಗದಲ್ಲಿ ಹೋಗುತ್ತಿದ್ದಾರೆ ಎಂದು ಯಡಿಯೂರಪ್ಪನವರ ರಾಜಕೀಯ ನಡೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನು ನಾನು ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಶೀಘ್ರದಲ್ಲೇ ಪ್ರವಾಸ ಮಾಡಲಿದ್ದು, ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಸಿದ್ದಗಂಗಾ ಮಠದಲ್ಲಿರುವ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಶ್ರೀ ಸಿದ್ದಲಿಂಗ ಸ್ವಾಮೀಜಿ ಯವರಿಂದ ಆಶೀರ್ವಾದ ಪಡೆದರು.