ತುಮಕೂರು: ಜಿಲ್ಲೆಯಲ್ಲಿ ಇಂದು ಮೂವರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ಪ್ರಯಾಣದ ಹಿನ್ನೆಲೆ ಹೊಂದಿರದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು ಆತಂಕ ಹೆಚ್ಚುವಂತೆ ಮಾಡಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮೊದಲ ಬಾರಿಗೆ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು, ಯಾವುದೇ ರೀತಿಯ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ. ಗಾರೆ ಕೆಲಸ ಮಾಡುತ್ತಿದ್ದ 38 ವರ್ಷದ ಈ ಮಹಿಳೆ, ಜೂನ್ 16ರಂದು ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಅನಾರೋಗ್ಯ ಪೀಡಿತರಾಗಿ ಚಿಕಿತ್ಸೆಗೆ ದಾಖಲಾಗಿದ್ದರು. ಆ ಸಂದರ್ಭದಲ್ಲಿ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆ ಕಳಿಸಲಾಗಿತ್ತು.
ಜೂನ್ 18ರಂದು ತುಮಕೂರು ಜಿಲ್ಲಾಸ್ಪತ್ರೆಯ ಲ್ಯಾಬ್ನಲ್ಲಿ ಪಾಸಿಟಿವ್ ಫಲಿತಾಂಶ ಬಂದಿದೆ. ತಕ್ಷಣ ಮಹಿಳೆಯನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮಹಿಳೆ ಯಾವುದೇ ರೀತಿಯ ಪ್ರಯಾಣದ ಹಿನ್ನೆಲೆ ಹೊಂದಿಲ್ಲ. ಆದರೆ ಬೆಂಗಳೂರಿನಿಂದ ಸಂಬಂಧಿಯೊಬ್ಬರು ವಾರಕ್ಕೆ ಎರಡು ಬಾರಿ ಮನೆಗೆ ಬಂದು ಹೋಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಅಲ್ಲದೆ ಈಕೆಯ ಪ್ರಾರ್ಥಮಿಕ ಸಂಪರ್ಕದ 15 ಮಂದಿಯನ್ನು ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಷನ್ನಲ್ಲಿ ಇರಿಸಲಾಗಿದೆ. ಸೋಂಕಿತ ಮಹಿಳೆ ವಾಸವಿದ್ದ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಅಲ್ಲದೆ ಈಕೆಯ ಪ್ರಾಥಮಿಕ ಸಂಪರ್ಕಿತರ ಮೇಲೆ ತೀವ್ರ ನಿಗಾ ಇರಿಸಲಾಗಿದೆ.
ಪ್ರಯಾಣದ ಹಿನ್ನೆಲೆ ಹೊಂದಿಲ್ಲದ ವ್ಯಕ್ತಿಗೂ ಸೋಂಕು: ತಿಪಟೂರು ಪಟ್ಟಣದ 42 ವರ್ಷದ ವ್ಯಕ್ತಿಯಲ್ಲಿಯೂ ಕೂಡ ಸೋಂಕು ದೃಢವಾಗಿದೆ. ಈ ಸೋಂಕಿತ ವ್ಯಕ್ತಿಯೂ ಕೂಡ ಯಾವುದೇ ರೀತಿಯ ಪ್ರಯಾಣದ ಹಿನ್ನೆಲೆ ಹೊಂದಿಲ್ಲ. ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ ಈ ವ್ಯಕ್ತಿ ಜೂನ್ 16ರಂದು ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು.
ಬಳಿಕ ಗಂಟಲು ದ್ರವ ಸಂಗ್ರಹಿಸಲಾಗಿತ್ತು. ಇದೀಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಚಿಕಿತ್ಸೆಗಾಗಿ ವ್ಯಕ್ತಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ 8 ಮಂದಿಯನ್ನು ಕೋವಿಡ್ ಆಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗಿದೆ.
ಅಲ್ಲದೆ ದ್ವಿತೀಯ ಸಂಪರ್ಕದಲ್ಲಿದಂತಹ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ವೈದ್ಯಕೀಯ ಸಿಬ್ಬಂದಿ ನಿರತರಾಗಿದ್ದಾರೆ. ಸೋಂಕಿತ ವ್ಯಕ್ತಿ ವಾಸವಿದ್ದ ತಿಪಟೂರು ಪಟ್ಟಣದ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.
ಗುಬ್ಬಿ ತಾಲೂಕಿನ ಬಾಣಸಿಗ ಕೂಡ ಸೋಂಕಿಗೆ ಒಳಗಾಗಿದ್ದಾರೆ. ಈತನನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಟ್ಟಾರೆ ತುಮಕೂರು ಕೋವಿಡ್-19 ಆಸ್ಪತ್ರೆಯಲ್ಲಿ 13 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ 31 ಮಂದಿ ಗುಣಮುಖರಾಗಿದ್ದಾರೆ. ಅದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 13,462 ಮಂದಿಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದ್ದು, 12,629ರಲ್ಲಿ ನೆಗೆಟಿವ್ ಬಂದಿದೆ. 700 ಜನರ ವರದಿಯ ನಿರೀಕ್ಷೆಯಲ್ಲಿ ಜಿಲ್ಲಾಡಳಿತವಿದೆ.