ತುಮಕೂರು : ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಜಿಲ್ಲೆಯ ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್ ಗೆ 2 ರೂ. ಹೆಚ್ಚಳ ಮಾಡಲಾಗಿದ್ದು ಮಾರ್ಚ್ 1ರಿಂದಲೇ ಪೂರ್ವಾನ್ವಯವಾಗಿ ಜಾರಿಯಾಗಲಿದೆ. ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ ತಿಳಿಸಿದ್ದಾರೆ.
ಇನ್ನೊಂದೆಡೆ ಗ್ರಾಹಕರು ಖರೀದಿಸುವ ಹಾಲಿನ ಬೆಲೆಯನ್ನು ಹೆಚ್ಚಿಸಿಲ್ಲ. 4.1 ಜಿಡ್ಡಿನಂಶ ಇರುವ ಹಾಲಿಗೆ 28.39 ರೂ. ಮತ್ತು 3.5 ಜಿಡ್ಡಿನಂಶ ಇರುವ ಹಾಲಿಗೆ ಲೀಟರ್ಗೆ 25 ರೂ. ನೀಡಲಾಗುತ್ತಿದೆ. ಫೆಬ್ರವರಿ ತಿಂಗಳಲ್ಲಿ ಲೀಟರ್ಗೆ 2 ರೂ. ಹೆಚ್ಚಳ ಮಾಡಿದ್ದು, ಈಗ ಪುನಃ 2 ರೂ. ಏರಿಕೆ ಮಾಡಿರುವುದರಿಂದ 4 ರೂ. ಹೆಚ್ಚಳ ಮಾಡಿದಂತಾಗಿದೆ. ಇದರಿಂದಾಗಿ ತುಮಕೂರು ಹಾಲು ಒಕ್ಕೂಟಕ್ಕೆ ತಿಂಗಳಿಗೆ 4.5 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಅವರು ತಿಳಿಸಿದರು.
ಒಕ್ಕೂಟ ಲಾಭದತ್ತ ಹೆಜ್ಜೆ ಹಾಕುತ್ತಿದ್ದು, ಲಾಭದ ಬಹುತೇಕ ಭಾಗವನ್ನು ರೈತರಿಗೆ ನೀಡುವ ಸಲುವಾಗಿ ಮತ್ತೆ 2 ರೂ. ಹೆಚ್ಚು ಮಾಡಲಾಗಿದೆ. ಈ ಮೂಲಕ ರಾಜ್ಯದ ಇತರೆ ಹಾಲು ಒಕ್ಕೂಟಗಳಿಗಿಂತ ಹೆಚ್ಚಿನ ದರ ನೀಡಿದಂತಾಗಿದೆ. ಅಲ್ಲದೆ ಕೋಲಾರ ಒಕ್ಕೂಟ ನೀಡುತ್ತಿರುವ ದರಕ್ಕೆ ಇದು ಸಮಾನಾಂತರವಾಗಿ ಇದೆ ಎಂದು ತಿಳಿಸಿದರು. ಇನ್ನು ಕೊರೊನಾ ಸೋಂಕು ಹರಡುವಿಕೆ ಭೀತಿ ವೇಳೆ ಹಾಲಿನ ಉತ್ಪನ್ನಗಳು ಹಾಗೂ ಹಾಲು ಮಾರಾಟವಾಗದೆ ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದ್ದು 9.5 ಕೋಟಿ ರೂ. ನಿವ್ವಳ ಲಾಭ ಬರುತ್ತಿದೆ ಎಂದು ತಿಳಿಸಿದರು.
ಓದಿ : ಬೆಳ್ಳಂಬೆಳಗ್ಗೆ 4ನೇ ವಿಡಿಯೋ ರಿಲೀಸ್ ಮಾಡಿದ ಸಿಡಿ ಲೇಡಿ: ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್!
73.54 ಕೋಟಿ ಮೊತ್ತದ ಬೆಣ್ಣೆ ಹಾಗೂ ಹಾಲಿನ ಪುಡಿ ದಾಸ್ತಾನು ಮಾಡಲಾಗಿದ್ದು, ಪ್ರಸ್ತುತ ಒಕ್ಕೂಟದಲ್ಲಿ ಲಾಭದ ಪ್ರಮಾಣವು ಕೂಡ ಹೆಚ್ಚಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.