ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ವ್ಯಾಪ್ತಿಯ ಕೋರಗೆರೆ ಗ್ರಾಮದ ದಂಪತಿಗೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ.
ನಾಗರಾಜು ಹಾಗೂ ಶಶಿಕಲಾ ಎಂಬುವವರು 2007ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಇವರು ಹುಳಿಯಾರು ಹೋಬಳಿಯ ಕೋರಗೆರೆ ಗ್ರಾಮದಲ್ಲಿ ವಾಸವಾಗಿದ್ದರು. ಆದರೆ ಕಳೆದ ಸೆ.21 ಗ್ರಾಮಸ್ಥರು ದಂಪತಿಗೆ ಬಹಿಷ್ಕಾರ ಹಾಕಿದ್ದಾರೆ. ಈ ಸಂಬಂಧ ರಕ್ಷಣೆ, ನ್ಯಾಯಕ್ಕಾಗಿ ಪತಿ-ಪತ್ನಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೋಗಿದ್ದಾರೆ.
ದಂಪತಿ ಅಲ್ಪ-ಸ್ವಲ್ಪ ಜಮೀನು ಹೊಂದಿದ್ದು. ಯಾರಿಗೂ ಅಂಜದೆ ಜೀವನ ನಡೆಸುತ್ತಿತ್ತು. ಆದರೆ ಇದನ್ನು ಸಹಿಸದ ಕೆಲ ಗ್ರಾಮದ ಮುಖಂಡರು ನಿರಂತರ ಕಿರುಕುಳ ನೀಡುತ್ತಾ ಹಲವು ಬಾರಿ ಹಲ್ಲೆ ಮಾಡಿದ್ದಾರಂತೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆ, ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತಂತೆ ರಾಜಿ ಪಂಚಾಯಿತಿ ಆಗಿ ಪ್ರಕರಣ ಸುಖಾಂತ್ಯವಾಗಿತ್ತು.
ಆದರೆ ಕೆಲ ದಿನಗಳ ಹಿಂದೆ ಅದೇ ಗ್ರಾಮದ ಮುಖಂಡರು ತಮ್ಮ ಬಳಿ ಕೂಲಿ ಕೆಲಸಕ್ಕೆ ಕರೆದಾಗ ದಂಪತಿ ತಿರಸ್ಕರಿಸಿದ್ದರು. ಹೀಗಾಗಿ ನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ.