ತುಮಕೂರು : ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ನೂತನ ಬಸ್ ನಿಲ್ದಾಣದ ಕಾಮಗಾರಿ ವಿಳಂಬ ಹಾಗೂ ಕಾಮಗಾರಿ ಪರಿಶೀಲನೆ ವೇಳೆ ಸ್ಥಳಕ್ಕೆ ಬಾರದ ಗುತ್ತಿಗೆದಾರರ ವಿರುದ್ಧ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಕೆಂಡಾಮಂಡಲರಾಗಿದ್ದಾರೆ.
ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆಗೆ ಆಗಮಿಸಿದ್ದ ಸಚಿವ ಭೈರತಿ ಬಸವರಾಜ್, ಐದು ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದೆ. ಆ ವೇಳೆಯಲ್ಲಿ ನಡೆಯುತ್ತಿದ್ದ ಬಸ್ ನಿಲ್ದಾಣದ ಕಾಮಗಾರಿ ಅದೇ ಹಂತದಲ್ಲಿದೆ. ಕಾಮಗಾರಿ ಮಾಡದೆ ಮತ್ತೇನು ಮಾಡ್ತಿದ್ದೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೆಎಸ್ಆರ್ಟಿಸಿ ಅಧಿಕಾರಿಗಳು ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲದಿರುವುದು ಸರಿಯಲ್ಲ. ಇಷ್ಟೊಂದು ದುಡ್ಡು ಬಿಡುಗಡೆ ಮಾಡಿದ್ರೂ ಕೆಲಸ ನಡೆಯುತ್ತಿಲ್ಲದಿರುವುದು ದುರದೃಷ್ಟಕರ ಎಂದು ಸಿಡಿಮಿಡಿಗೊಂಡರು. ಗುತ್ತಿಗೆದಾರರು ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯವಹಿಸಿರುವುದಕ್ಕೆ ಸಚಿವರು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಶಾಸಕ ಜ್ಯೋತಿ ಗಣೇಶ್ ಸೇರಿ ಹಲವರು ಉಪಸ್ಥಿತರಿದ್ದರು.