ತುಮಕೂರು: ಜಿಲ್ಲೆಯ ವಿವಿಧೆಡೆ ಶಿವರಾತ್ರಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಅದರಲ್ಲೂ ಜಾಗರಣೆ ಹಿನ್ನೆಲೆಯಲ್ಲಿ ಉಪವಾಸ ಮಾಡುವ ಶಿವಭಕ್ತರು ಸಂಜೆ ವೇಳೆಗೆ ದೇವರ ದರ್ಶನ ಪಡೆದು ಜಾಗರಣೆಯಲ್ಲಿ ತೊಡಗುತ್ತಾರೆ.
ಇನ್ನು ವಿವಿಧ ದೇಗುಲಗಳಲ್ಲಿ ತಮ್ಮ ಆರಾಧ್ಯ ದೇವರಿಗೆ ಸ್ವತಃ ತಾವೇ ಪೂಜೆ ಮಾಡುವ ಸಂಕಲ್ಪ ಹೊಂದಿರುತ್ತಾರೆ. ಆದರೆ ಗರ್ಭಗುಡಿ ಪ್ರವೇಶಿಸಲು ಸಾಧ್ಯವಾಗಿರುವುದಿಲ್ಲ. ಹೀಗಾಗಿ ಅಂಥ ಶಿವಭಕ್ತರಿಗೆ ಸುಲಭವಾಗಿ ಹಾಲಿನ ಅಭಿಷೇಕ ಮಾಡಲು ತುಮಕೂರಿನ ಮಹಾಲಕ್ಷ್ಮಿ ದೇವಾಲಯದಲ್ಲಿ ವಿಭಿನ್ನವಾಗಿ ವ್ಯವಸ್ಥೆ ಮಾಡಲಾಗಿತ್ತು.
ಗರ್ಭಗುಡಿ ಹೊರಭಾಗ ಮೇಲ್ಬಾಗದಲ್ಲಿ ಪೈಪೊಂದನ್ನು ಜೋಡಿಸಿ ನೇರವಾಗಿ ಮಹಾಲಕ್ಷ್ಮಿ ಮೂರ್ತಿಯ ಮೇಲೆ ಅಭಿಷೇಕ ಆಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಇನ್ನೂ ಹೊರಭಾಗದಲ್ಲಿ ಭಕ್ತರು ಹಾಲನ್ನು ಪೈಪಿನ ಮೂಲಕ ಹಾಕಿದಾಗ ನೇರವಾಗಿ ಹಾಲು ದೇವಿಯ ಮೇಲೆ ಅಭಿಷೇಕವಾಗುತ್ತದೆ. ಈ ಮೂಲಕ ಉಪವಾಸ ನಿರತ ಭಕ್ತರು ದೇವರ ಪೂಜೆಯನ್ನು ಮಾಡಿ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಂಡಿದ್ದಾರೆ.