ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಮಿಡತೆಗಳು ಎಕ್ಕದ ಗಿಡದ ಎಲೆಗಳನ್ನು ತಿಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ ರಾಕೇಶ್ ಕುಮಾರ್ ಸಚಿವರಿಗೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಕಾನೂನು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಇಂದು 2019-20 ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ಮಳೆಯ ವಿವರ ಪಡೆದು ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ಸಚಿವರು, ಸರ್ಕಾರದ ಯೋಜನೆಗಳಿಂದ ರೈತರಿಗೆ ಅನುಕೂಲವಾಗುವಂತೆ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಎಚ್ಚರ ವಹಿಸಿ ಎಂದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಮಾವಿನ ವ್ಯಾಪಾರ ಮಾಡಲು ಸರಿಯಾದ ವ್ಯವಸ್ಥೆ ರೈತರಿಗೆ ದೊರೆಯುತ್ತಿಲ್ಲ. ತರಕಾರಿಯನ್ನು ಮನೆಬಾಗಿಲಿಗೆ ತೆಗೆದುಕೊಂಡು ಹೋದಂತೆ ಹಣ್ಣುಗಳನ್ನು ಕೊಂಡೊಯ್ದು ಮಾರಾಟ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
ಮಧುಗಿರಿ ತಾಲೂಕಿನ ಭಾಗದಲ್ಲಿ ಎಕ್ಕದ ಗಿಡದ ಎಲೆಗಳನ್ನು ಮಿಡತೆಗಳು ತಿಂದ ಬಗ್ಗೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ, ಅಲ್ಲಿನ ಮಿಡತೆಗಳು ಕೇವಲ ಎಕ್ಕದ ಗಿಡದ ಎಲೆಗಳನ್ನು ಮಾತ್ರ ತಿನ್ನುತ್ತಿವೆ. ಈ ಬಗ್ಗೆ ಈಗಾಗಲೇ ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದರು.