ತುಮಕೂರು: ಕೊಟ್ಟಿಗೆಯಲ್ಲಿ ಕಟ್ಟಿದ್ದ ಕುರಿಗಳ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸಂಕೇನಹಳ್ಳಿ ಗೊಲ್ಲರಟ್ಟಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಚಿರತೆ ದಾಳಿ ಮಾಡಿದ ಪರಿಣಾಮ ಎರಡು ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ. ಇನ್ನು ಮೂರು ಕುರಿಗಳನ್ನು ಚಿರತೆ ಕಚ್ಚಿ ಗಾಯಗೊಳಿಸಿದೆ. ಇವು ಕುರಿಗಾಹಿ ಶಿವರಾಜ್ ಎಂಬುವರಿಗೆ ಸೇರಿದ ಕುರಿಗಳಾಗಿವೆ. ನಿನ್ನೆ ರಾತ್ರಿ ಸುಮಾರು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ನಂತರ ಕೊಟ್ಟಿಗೆಗೆ ನುಗ್ಗಿದ ಚಿರತೆ, ಕುರಿಗಳ ಮೇಲೆ ದಾಳಿ ಮಾಡಿದೆ.
ಶಿವರಾಜ್ ಕೊಟ್ಟಿಗೆ ಬಳಿ ಹೋಗುತ್ತಿದ್ದಂತೆ ಅವರ ಮೇಲೆಯೂ ಚಿರತೆ ದಾಳಿ ಮಾಡಲು ಮುಂದಾಗಿದೆ. ತಕ್ಷಣ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದು ಜನರನ್ನು ಕರೆದುಕೊಂಡು ಬರುವ ವೇಳೆಗೆ ಚಿರತೆ ಅಲ್ಲಿಂದ ಪರಾರಿಯಾಗಿದೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.