ತುಮಕೂರು: ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿ ಕಾನೂನು, ಯೋಜನೆಗಳನ್ನು ವಿರೋಧಿಸಿ ಸೆಪ್ಟಂಬರ್ 23, 24 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ನ ರಾಜ್ಯಾಧ್ಯಕ್ಷ ಕೆ. ಮಹಾಂತೇಶ ತಿಳಿಸಿದರು.
ರೈತರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭೂ ಮಸೂದೆ ಕಾಯ್ದೆಯನ್ನು ಬಲಪಡಿಸುವ ಮೂಲಕ ರೈತರು ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ವಲಸೆ ಹೋಗದಂತೆ ತಡೆಯುವ ಕಾರ್ಯ ಮಾಡಬೇಕಿತ್ತು. ಆದರೆ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗುವಂತೆ ಭೂ ಮಸೂದೆ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದಾರೆ ಎಂದು ಕೆ. ಮಹಾಂತೇಶ ತಿಳಿಸಿದರು.
ಕೇಂದ್ರ ಸರ್ಕಾರ ರೈತರಿಗೆ ಮಾರಕವಾದ 3 ತಿದ್ದುಪಡಿಗಳನ್ನು ಸುಗ್ರೀವಾಜ್ಞೆಯ ಮೂಲಕ ಹಾಗೂ ರಾಜ್ಯ ಸರ್ಕಾರ ಎರಡು ತಿದ್ದುಪಡಿಗಳನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಿದೆ. ಭೂ ಮಸೂದೆ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಕೃಷಿ ಕಾರ್ಮಿಕರು ರೈತಾಪಿ ವರ್ಗದವರು ಇಂದು ಕೃಷಿಯನ್ನು ಬಿಟ್ಟು ಗ್ರಾಮೀಣ ಭಾಗದಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವಂತಾಗಿದ್ದು, ನಗರದಲ್ಲಿ ಇವರು ಹಮಾಲಿ ಕಾರ್ಮಿಕರಾಗಿ, ಕಟ್ಟಡ ಕಾರ್ಮಿಕರಾಗಿ, ಮನೆ ಕೆಲಸದವರಾಗಿ, ಬೀದಿ ಬದಿ ವ್ಯಾಪಾರಿಗಳಾಗಿ, ಗಾರ್ಮೆಂಟ್ಸ್ ಗಳಲ್ಲಿ ಅತಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುವಂತಾಗಿದೆ ಎಂದು ವಿಷಾದಿಸಿದರು.
ಜನವಿರೋಧಿ ಕಾನೂನುಗಳನ್ನು ಜಾರಿಗೊಳಿಸಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಸೆಪ್ಟೆಂಬರ್ 23ರಂದು ಎಪಿಎಂಸಿ ಮುಂದೆ ಹಾಗೂ 24 ರಂದು ಎಲ್ಲಾ ಜಿಲ್ಲಾಧಿಕಾರಿಗಳ ತಾಲೂಕು ಕಚೇರಿ ಮುಂದೆ ಸಾಮೂಹಿಕ ಪ್ರತಿಭಟನೆ ನಡೆಸಲಾಗುವುದು ಎಂದು ಕೆ. ಮಹಾಂತೇಶ ತಿಳಿಸಿದರು.