ತುಮಕೂರು: ಜನಸಾಮಾನ್ಯರಲ್ಲಿಯೂ ಮಾನಸಿಕ ಒತ್ತಡಗಳು ಹೆಚ್ಚಾಗಿವೆ. ಹಾಗಾಗಿ ಆತ್ಮಹತ್ಯೆಯ ಹಾದಿ ತುಳಿಯುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಅಧ್ಯಕ್ಷರಾದ ಜಿ.ಎಸ್. ದೇಶಪಾಂಡೆ ಕಳವಳ ವ್ಯಕ್ತಪಡಿಸಿದರು.
ಕೆಲ ವರ್ಷಗಳ ಹಿಂದೆ 'ಆತ್ಮಹತ್ಯೆ' ಎಂಬ ಪದವನ್ನೇ ಕೇಳಿರಲಿಲ್ಲ. ಅಂದು ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಹೆಚ್ಚಾಗಿದ್ದವು. ಇಂದು ವಿಭಕ್ತ ಕುಟುಂಬಗಳು ಹೆಚ್ಚಾದಂತೆ ಒತ್ತಡಗಳೂ ಕೂಡ ಹೆಚ್ಚಾಗಿವೆ. ಹಾಗಾಗಿ ಆತ್ಮಹತ್ಯೆಗಳು ಸಾಮಾನ್ಯವಾಗುತ್ತಿವೆ. ನಿರುದ್ಯೋಗ ಸಮಸ್ಯೆಯೂ ಇದಕ್ಕೆ ಬಲವಾದ ಕಾರಣವಾಗಿದೆ. ಜೊತೆಗೆ ಕೆಲಸದೊತ್ತಡ ಕೂಡಾ ಉದ್ಯೋಗಿಗಳನ್ನು ಮಾನಸಿಕ ಖಿನ್ನತೆಗೆ ಒಳಪಡುವಂತೆ ಮಾಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ತಂದೆ-ತಾಯಂದಿರು ಮಕ್ಕಳಿಗೆ ಮೊಬೈಲ್ ಬಳಸಬೇಡಿ ಎಂದು ಹೇಳಿದರೆ ಸಾಕು, ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಓದಿನಲ್ಲಿ ಕಡಿಮೆ ಅಂಕಗಳು ಬಂದರೆ, ಪ್ರೀತಿಯಲ್ಲಿ ಮನಸ್ತಾಪ ಉಂಟಾದರೆ ಯುವಸಮೂಹ ಆತ್ಮಹತ್ಯೆ ಹಾದಿ ಹಿಡಿಯುತ್ತಿರುವುದು ವಿಷಾದನೀಯ ಸಂಗತಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಅಧ್ಯಕ್ಷ .ಎಸ್. ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು.
2018 ರಲ್ಲಿ 380 ವ್ಯಕ್ತಿಗಳು ವಿವಿಧ ರೀತಿಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ಆತ್ಮಹತ್ಯೆ ಸಂಖ್ಯೆ 200ರ ಸಮೀಪ ಬಂದಿದೆ. ಇಂತಹ ಸುದ್ದಿಗಳನ್ನು ಪ್ರತಿದಿನ ನಾವು ನೋಡುವುದರಿಂದ ಮನಸ್ಸಿಗೆ ಬೇಸರವಾಗುತ್ತದೆ, ಪೋಲಿಸ್ ಇಲಾಖೆಯಿಂದಲೂ ಆತ್ಮಹತ್ಯೆ ತಡೆಯಲು ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿ ಕೃಷ್ಣ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಸಿಇಓ ಶುಭಾ ಕಲ್ಯಾಣ್, ಭಾರತದಲ್ಲಿ ಎರಡು ಲಕ್ಷ ಜನ ಪ್ರತಿವರ್ಷ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಅದರಲ್ಲಿ ಕೃಷಿಯಲ್ಲಿ ತೊಡಗಿರುವ ರೈತರು ಹೆಚ್ಚಿನ ಪ್ರಮಾಣದಲ್ಲಿ ಸಾವನ್ನಪ್ಪಿರುವುದು ವಿಷಾದನೀಯ. ಪ್ರತಿಯೊಬ್ಬ ರೈತರು ಸಹ ತಮ್ಮಲ್ಲಿ ಇರುವಂತಹ ಜಾಗದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು, ಆ ಮೂಲಕ ಕೃಷಿಯಲ್ಲಿ ಬೆಳವಣಿಗೆ ಹೊಂದಬಹುದು ಎಂದು ಸಲಹೆ ನೀಡಿದ್ರು. ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ಮಹಿಳೆಯರು ಸಣ್ಣ ವಿಚಾರಗಳಿಗೂ ಆತ್ಮಹತ್ಯೆ ಹಾದಿ ತುಳಿಯುತ್ತಿರುವುದು ಬದಲಾಗಬೇಕು ಮಹಿಳೆಯರು ಆರ್ಥಿಕವಾಗಿ, ಸದೃಢರಾಗಿ ಬೆಳೆಯುವ ಮೂಲಕ ಸುತ್ತಮುತ್ತಲಿನ ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಬೇಕು ಎಂದು ಹೇಳಿದ್ರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳ ಕಚೇರಿ ಮಾನಸಿಕ ವಿಭಾಗ, ಸ್ನೇಹ ಮನೋವಿಕಾಸ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.