ತುಮಕೂರು: ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸರ್ಕಾರಿ ಬಸ್ ಸಂಪರ್ಕವೇ ಕಾಣದ ಕೊರಟಗೆರೆ ತಾಲೂಕಿನ ನವಿಲು ಕುರಿಕೆ ಗ್ರಾಮಕ್ಕೆ ಬಸ್ ಬಂದಿದ್ದು, ಗ್ರಾಮಸ್ಥರು ಸಂಭ್ರಮದಿಂದ ಬಸ್ಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಸ್ವಕ್ಷೇತ್ರ ಕೊರಟಗೆರೆ ತಾಲೂಕಿನ ಈ ಹಳ್ಳಿಯ ಜನರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು.
ಬಸ್ ಸಂಪರ್ಕ ಇಲ್ಲದೇ ನಿತ್ಯ ಪರದಾಡುತ್ತಿದ್ದ ಗ್ರಾಮಸ್ಥರು, ವಿದ್ಯಾರ್ಥಿಗಳು ಇತ್ತೀಚೆಗೆ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ' ಕಾರ್ಯಕ್ರಮದಲ್ಲಿ ಬಸ್ಗಾಗಿ ಮನವಿ ಸಲ್ಲಿಸಿದ್ದರು. ಈ ವೇಳೆ ಗ್ರಾಮಕ್ಕೆ ಬಸ್ ಸಂಪರ್ಕ ಕಲ್ಪಿಸುವಂತೆ ಅಂದಿನ ತಹಶೀಲ್ದಾರ್ ನಹಿದ ಜಂ. ಜಂ. ಅವರಿಗೆ ಗೃಹ ಸಚಿವರು ನಿರ್ದೇಶನ ನೀಡಿದ್ದರು. ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದ ವಿದ್ಯಾರ್ಥಿಗಳು ಇದೀಗ ಫುಲ್ ಖುಷ್ ಆಗಿದ್ದಾರೆ.
ಪತ್ರಿದಿನ ತುಮಕೂರು, ಕೊರಟಗೆರೆಯತ್ತ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಮೈಲುಗಟ್ಟಲೆ ನಡೆದುಕೊಂಡೇ ಹೋಗುತ್ತಿದ್ದರು. ಈಗ ಸರ್ಕಾರಿ ಬಸ್ನಲ್ಲಿ ಪ್ರಯಾಣ ಮಾಡುವ ಸೌಲಭ್ಯ ದೊರೆತಿದೆ. ಬಸ್ ಕಂಡು ಸಂತಸಪಟ್ಟ ನವಿಲುಕುರಿಕೆ, ದಮಗಲಯ್ಯನ ಪಾಳ್ಯ ಗ್ರಾಮಸ್ಥರು, ಸರ್ಕಾರಿ ಬಸ್ಗೆ ಬಾಳೆ ಕಂದು, ಹೂ, ಬಲೂನು, ಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಇದನ್ನೂ ಓದಿ: ದಾವಣಗೆರೆ: ಹರನಹಳ್ಳಿ ಕೆಂಗಾಪುರ ಗ್ರಾಮಕ್ಕೆ ಕೊನೆಗೂ ಬಂದ ಬಸ್.. ಪೂಜೆ ಮಾಡಿ ಗ್ರಾಮಸ್ಥರ ಹರ್ಷ