ತುಮಕೂರು: ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಚೆಂಗಂನಲ್ಲಿ ಭಾನುವಾರ ಸಂಭವಿಸಿದ್ದ ಕಾರು ಮತ್ತು ಲಾರಿ ನಡುವಿನ ಅಪಘಾತದಲ್ಲಿ ಮೃತರಾದ ತುಮಕೂರಿನ ನಿವಾಸಿಗಳಾದ ಒಂದೇ ಕುಟುಂಬದ ಏಳು ಮಂದಿಯ ಅಂತ್ಯಕ್ರಿಯೆ ಇಂದು ನಡೆಯಿತು. ಏಳು ಜನರನ್ನು ಒಟ್ಟಿಗೆ ಕಳೆದುಕೊಂಡು ಅಂತ್ಯ ಸಂಸ್ಕಾರ ನೆರವೇರಿಸಿದ ಸಂಬಂಧಿಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ತಿರುವಣ್ಣಾಮಲೈನ ಪಕ್ಕಿರಿಪಾಳ್ಯಂ ಸಮೀಪ ತಿರುವಣ್ಣಮಲೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಇದರಿಂದ ಇಬ್ಬರು ಮಕ್ಕಳು, ನಾಲ್ವರು ಪುರುಷರು, ಓರ್ವ ಮಹಿಳೆ ಸೇರಿ ಏಳು ಮಂದಿ ಸ್ಥಳದಲ್ಲೇ ಅಸುನೀಗಿದ್ದರು. ತುಮಕೂರಿನ ಜಯನಗರದ ನಿವಾಸಿಗಳಾದ ಚನ್ನಪ್ಪ, ಮಲ್ಲರ್, ಮಣಿಕಂಠ ಹಾಗೂ ಹೇಮಂತ್ ಸೇರಿ ಏಳು ಮಂದಿ ಮೃತಪಟ್ಟಿದ್ದರು.
ಬೆಂಗಳೂರಿನತ್ತ ಬರುವಾಗ ದುರ್ಘಟನೆ: ಚನ್ನಪ್ಪ ಕುಟುಂಬಸ್ಥರು ತಮಿಳುನಾಡಿನಿಂದ ಬೆಂಗಳೂರಿನತ್ತ ಬರುವಾಗ ಅವಘಡ ಸಂಭವಿಸಿತ್ತು. ತಿರುವಣ್ಣಮಲೈ ಜಿಲ್ಲೆಯ ಪಕ್ಕಿರಿಪಾಳ್ಯಂ ಪಂಚಾಯತ್ನ ಬಳಿ ಎದುರಿನಿಂದ ಬಂದ ಲಾರಿಗೆ ಕಾರು ಮುಖಾಮುಖಿ ರಭಸವಾಗಿ ಡಿಕ್ಕಿ ಹೊಡೆದಿತ್ತು. ಅಪಘಾತಕ್ಕೀಡಾದ ಲಾರಿ ಸಿಂಗಾರಪೇಟೆಯಿಂದ ತಿರುವಣ್ಣಮಲೈ ಕಡೆಗೆ ಬರುತ್ತಿತ್ತು. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಏಳು ಮಂದಿ ಸ್ಥಳದಲ್ಲೇ ಮೃತರಾಗಿದ್ದರು. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಸ್ಥಳೀಯರ ನೆರವಿನಿಂದ ಕಾರಿನೊಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದಿದ್ದರು.
ಪರಿಹಾರ ಘೋಷಿಸಿರುವ ಸಿಎಂ ಸ್ಟಾಲಿನ್: ಅಪಘಾತದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ''ಅಪಘಾತದ ಸುದ್ದಿ ತಿಳಿದು ದುಃಖವಾಯಿತು. ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿರುವುದು ದುರಂತ. ಈ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ" ಎಂದು ತಿಳಿಸಿದ್ದರು.
ಇದನ್ನೂ ಓದಿ: ತಿರುವಣ್ಣಮಲೈ-ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತ: ಒಂದೇ ಕುಟುಂಬದ 7 ಮಂದಿ ಸಾವು