ತುಮಕೂರು: ನಗರದ ಪಿ. ಹೆಚ್. ಕಾಲೋನಿಯನ್ನು ಸೀಲ್ ಡೌನ್ ಮಾಡಿ 14 ದಿನಗಳು ಕಳೆದಿವೆ. ಆದರೆ, ಅದೃಷ್ಟವಶಾತ್ ಇದುವರೆಗೂ ಯಾರಲ್ಲೂ ಸೋಂಕು ಕಂಡುಬಂದಿಲ್ಲ. ಆದ್ದರಿಂದ ಸೀಲ್ ಡೌನ್ ತೆರವುಗೊಳಿಸಬೇಕು ಎಂದು ಮಾಜಿ ಶಾಸಕ ರಫೀಕ್ ಅಹಮದ್ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
14 ದಿನಗಳ ಹಿಂದೆ ಗುಜರಾತ್ ಮೂಲದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈವರೆಗೆ ಇನ್ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಈ ಕಾಲೋನಿಯಲ್ಲಿ ಹಿಂದುಳಿದವರು, ಕಡುಬಡವರು, ದಿನಗೂಲಿ ಕೆಲಸ ಮಾಡುವ ಕಾರ್ಮಿಕರಿದ್ದು, ಸೀಲ್‌ಡೌನ್ ನಿಂದಾಗಿ ಇವರ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ಮೊದಲ ಹಂತದ ಜನತಾ ಕರ್ಫ್ಯೂ ಆರಂಭವಾಗಿ ಸುಮಾರು 45 ದಿನಗಳು ಕಳೆದಿವೆ ಅಂದಿನಿಂದ ಇವರ ಪಾಡು ಹೇಳತೀರದಾಗಿದೆ.
ಇನ್ನೂ ಏಪ್ರಿಲ್ 30ರ ನಂತರ ಸರ್ಕಾರದಿಂದಲೂ ಯಾವುದೇ ರೀತಿಯ ಸೌಲಭ್ಯ ಲಭಿಸದೆ ಆರ್ಥಿಕ ಪರಿಸ್ಥಿತಿ ಇನ್ನಷ್ಟು ದುಸ್ಥಿತಿಗೆ ತಲುಪಿದೆ. ನಿತ್ಯ ಅಗತ್ಯವಿರುವ ಹಾಲು, ತರಕಾರಿ, ಆಹಾರ ಸಾಮಗ್ರಿ, ಔಷಧಿಗಳನ್ನು ಖರೀದಿಸಲೂ ಇವರಿಗೆ ಸಾಧ್ಯವಾಗುತ್ತಿಲ್ಲ. ಕೆಲ ಸಂಘ ಸಂಸ್ಥೆಗಳು, ಸ್ವಯಂ ಸೇವಕರು ಹಾಗೂ ಜನಪ್ರತಿನಿಧಿಗಳು ಸ್ವಲ್ಪ ಮಟ್ಟಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದರೂ ಕೂಡ ಸೀಲ್ ಡೌನ್ ಅವಧಿ ಮುಗಿಯುವವರೆಗೆ ಅವು ಸಾಕಾಗುವುದಿಲ್ಲ. ಹೀಗಾಗಿ ಒಂದಾ ಸರ್ಕಾರವೇ ಅಗತ್ಯ ಸಾಮಗ್ರಿಗಳನ್ನು ನೀಡಿ ಬಡಜನರಿಗೆ ನೆರವಾಗಬೇಕು ಅಥವಾ ಸೀಲ್ ಡೌನ್ ಸೀಮಿತಗೊಳಿಸಿರುವ ಅವಧಿ ಕಡಿತಗೊಳಿಸಿ ಜನರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.