ತುಮಕೂರು: ಜಿಲ್ಲೆಯಲ್ಲಿ ಒಂದೆಡೆ ಕೋವಿಡ್ ಸೋಂಕಿತರು ಚಿಕಿತ್ಸೆಗೆಂದು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದರೆ, ಇನ್ನೊಂದೆಡೆ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಸಿಬ್ಬಂದಿಯೇ ಕೋವಿಡ್ಗೆ ತುತ್ತಾಗುತ್ತಿದ್ದಾರೆ.
ತುಮಕೂರು ಜಿಲ್ಲಾಸ್ಪತ್ರೆ ಒಂದರಲ್ಲೇ 6 ಮಂದಿ ವೈದ್ಯರು, 8 ಮಂದಿ ದಾದಿಯರು ಹಾಗೂ 9 ಮಂದಿ ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗುಲಿದೆ. ಜಿಲ್ಲಾದ್ಯಂತ ಒಟ್ಟು 13 ವೈದ್ಯರು, 16 ಮಂದಿ ಕಿರಿಯ ಆರೋಗ್ಯ ಸಹಾಯಕರು, 13 ದಾದಿಯರು, 12 ವೈದ್ಯಕೀಯ ಸಿಬ್ಬಂದಿ ಹಾಗೂ ಐವರು ಆಶಾ ಕಾರ್ಯಕರ್ತೆಯರು ಸೋಂಕಿನಿಂದ ಬಳಲುತ್ತಿದ್ದಾರೆ. ನಿತ್ಯ ಹೀಗೆ ವೈದ್ಯಕೀಯ ಸಿಬ್ಬಂದಿಯೇ ಸೋಂಕಿಗೆ ತುತ್ತಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಆಸ್ಪತ್ರೆಗೆ ದಾಖಲಾಗುವ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಹೇಗೆ ಎಂಬ ಚಿಂತೆ ಜಿಲ್ಲಾಡಳಿತಕ್ಕೆ ಶುರುವಾಗಿದೆ.
ಇದನ್ನೂ ಓದಿ: 40 ವೆಂಟಿಲೇಟರ್ ಇದ್ರೂ ಬಳಕೆ ಮಾಡಿಲ್ಲ, ಇದು ದೊಡ್ಡ ಅಪರಾಧ: ಸಚಿವ ಸುಧಾಕರ್
ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗುಲುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಿ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಕೋವಿಡ್ ಪರೀಕ್ಷೆಗೆ ಬರುವ ಸಾರ್ವಜನಿಕರನ್ನು ಸೂಕ್ಷ್ಮವಾಗಿ ಪರೀಕ್ಷಿಸಬೇಕಿದೆ. ಸಿಬ್ಬಂದಿಯ ಪ್ರಯಾಣಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲು ಚಿಂತನೆ ನಡಸಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸುರೇಶ್ ಬಾಬು ತಿಳಿಸಿದ್ದಾರೆ.