ತುಮಕೂರು: ಚಿಕ್ಕಬಳ್ಳಾಪುರದಲ್ಲಿ ನಡೆದಿರುವ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಗೆ ಕಾರಣಕರ್ತರಾದ ಆರೋಪಿಗಳ ವಿರುದ್ಧ ಪಕ್ಷಾತೀತವಾಗಿ ನಿಷ್ಪಕ್ಷಪಾತವಾಗಿ ತನಿಖೆ ನಡೆದು, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಆಗ್ರಹಿಸಿದ್ದಾರೆ.
ಶಿರಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕಲ್ಲು ಕ್ವಾರಿಗಳಲ್ಲಿ ಅಕ್ರಮಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿತ್ತು. ಅಕ್ರಮವಾಗಿ ನಡೆಯುತ್ತಿದ್ದ, ಕಲ್ಲು ಕ್ವಾರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ಫೋಟಕಗಳನ್ನು ಇರಿಸಿಕೊಳ್ಳಲಾಗಿತ್ತು.
ಓದಿ:ಶಿರಾಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿ : ಸುಧಾಕರ್ಗೆ ಬಹಿರಂಗವಾಗಿ ಆಗ್ರಹಿಸಿದ ಜನ
ಅಂತಹ ಸ್ಫೋಟಕಗಳನ್ನು ಅರಣ್ಯ ಪ್ರದೇಶಗಳಿಗೆ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡುವಂತೆ ಕಾರ್ಮಿಕರಿಗೆ ಕಲ್ಲು ಕ್ವಾರಿ ಮಾಲೀಕ ತಿಳಿಸಿದ್ದ. ಹೀಗಾಗಿ ಅಮಾಯಕ ಕಾರ್ಮಿಕರು ಅದನ್ನು ತೆಗೆದುಕೊಂಡು ಹೋದ ಸಂದರ್ಭದಲ್ಲಿ ಧೂಮಪಾನ ಮಾಡಿರಬಹುದು ಎಂದು ಎಫ್ಎಸ್ಎಲ್ ತಂಡದ ವರದಿ ಮೇಲ್ನೋಟಕ್ಕೆ ತಿಳಿಸಿದೆ. ಸ್ಫೋಟದಲ್ಲಿ ಕಾರ್ಮಿಕರ 6 ದೇಹಗಳು ಛಿದ್ರ ಛಿದ್ರವಾಗಿದ್ದವು. ಮೃತದೇಹಗಳನ್ನು ಪತ್ತೆ ಹಚ್ಚಲು ಕಷ್ಟಕರವಾಗಿತ್ತು ಎಂದರು.