ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ವಿವಿಧೆಡೆ ಕಳೆದೆರಡು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದು, ಮೇಕೆ ಕುರಿಗಳ ಮೇಲೆ ದಾಳಿ ನಡೆಸಿದೆ. ನಿಡಸಾಲೆ ಹಾಗೂ ಕುಣಿಗಲ್ ತಾಲೂಕಿನ ಗರಗದೊಡ್ಡಿಯಲ್ಲಿ ಚಿರತೆಗಳು ದೊಡ್ಡಿಗಳಿಗೆ ನುಗ್ಗಿ ಕುರಿ ಹಾಗೂ ಮೇಕೆಗಳನ್ನು ತಿಂದು ಹಾಕಿವೆ.
ಗರಗದೊಡ್ಡಿ ಗ್ರಾಮದ ರಾಮಕೃಷ್ಣಯ್ಯ ಎಂಬವರಿಗೆ ಸೇರಿದ ಮೂರು ಕುರಿ, 12 ಮೇಕೆಗಳ ಮೇಲೆ ಚಿರತೆ ದಾಳಿ ಮಾಡಿದ್ದು, ಪರಿಣಾಮ 8 ಮೇಕೆ 2 ಕುರಿ ಮೃತಪಟ್ಟಿವೆ.
ಇನ್ನು ಸ್ಥಳಕ್ಕೆ ಕೊರಟಗೆರೆ ತಹಸೀಲ್ದಾರ್ ನಹೀದಾ ಬಾನು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರೈತ ರಾಮಕೃಷ್ಣಯ್ಯಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಇನ್ನೊಂದೆಡೆ, ಕುಣಿಗಲ್ ತಾಲೂಕಿನ ನಿಡಸಾಲೆ ಗ್ರಾಮದಲ್ಲಿ ರೈತರ ಮನೆಯಿಂದ ಮೇಕೆಯನ್ನು ಹೊತ್ತೊಯ್ದ ಚಿರತೆ ತಿಂದು ಹಾಕಿದೆ. ಚಿರತೆ ದಾಳಿಗೆ ಬೆಚ್ಚಿ ಬಿದ್ದಿರುವ ಜಿಲ್ಲೆಯ ಜನರು ಅದನ್ನು ಸೆರೆಹಿಡಿಯುವಂತೆ ಮನವಿ ಮಾಡಿದ್ದಾರೆ.